ಬಯಸಿದ ಬ್ಯಾಟಿಂಗ್ ನಡೆಯಲಿಲ್ಲ, ರನ್ ಬರಲಿಲ್ಲ, ಟೀಂ ಇಂಡಿಯಾ 147/7

ಕೃಷ್ಣವೇಣಿ ಕೆ

ಗುರುವಾರ, 26 ಜನವರಿ 2017 (17:54 IST)
ಕಾನ್ಪುರ: ಟಿ-ಟ್ವೆಂಟಿ ಸರಣಿಗೆ ಮೊದಲು ನೆಟ್ ಪ್ರಾಕ್ಟೀಸ್ ಮಾಡುವಾಗ ಧೋನಿ ಜಸ್ಪ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ಡೆತ್ ಓವರ್ ಗಳಲ್ಲಿ ಹೇಗೆ ಬ್ಯಾಟಿಂಗ್ ಮಾಡಬೇಕೆಂದು ಅಭ್ಯಾಸ ನಡೆಸಿದ್ದರು. ಅದು ಮೊದಲ ಟಿ-ಟ್ವೆಂಟಿ ಪಂದ್ಯದಲ್ಲೇ  ಚೆನ್ನಾಗಿಯೇ ಉಪಯೋಗಕ್ಕೆ ಬಂತು.

 
ಯಾಕೆಂದರೆ ಆರಂಭದಲ್ಲೇ ನಾಯಕ ವಿರಾಟ್ ಕೊಹ್ಲಿ ಕೊಂಚ ಉತ್ತಮ ಬ್ಯಾಟಿಂಗ್ ನಡೆಸಿದ್ದು ಬಿಟ್ಟರೆ, ಬೇರೆ ಯಾವುದೇ ಬ್ಯಾಟ್ಸ್ ಮನ್ ಗಳು ರನ್ ಗತಿ ಹೆಚ್ಚಿಸುವ, ನಿಂತು ಆಡುವ ಲಕ್ಷಣ ತೋರಲಿಲ್ಲ. ಮಧ್ಯಮ ಕ್ರಮಾಂಕದ ಜವಾಬ್ದಾರಿ ಪೂರ್ತಿ ಧೋನಿ ಹೆಗಲಿಗೇರಿತ್ತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ವಿಕೆಟ್ ನಿಯಮಿತವಾಗಿ ಬೀಳುತ್ತಿದ್ದರಿಂದ ರನ್ ಗತಿ ಹೆಚ್ಚಲಿಲ್ಲ. ಇದರಿಂದಾಗಿ ಭಾರತ ನಿಗದಿತ 20 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಲಷ್ಟೇ ಶಕ್ತವಾಯಿತು.  ಭಾರತದ ಪರ ಧೋನಿ (36) ಗರಿಷ್ಠ ಸ್ಕೋರ್ ಮಾಡಿದವರು.

ಇಂಗ್ಲೆಂಡ್ ಮಧ್ಯಮ ಓವರ್ ಗಳನ್ನು ಚೆನ್ನಾಗಿಯೇ ನಿಭಾಯಿಸಿತು. ಭಾರತ ಹೊಡೆ ಬಡಿಯ ಆಟಗಾರರಿಗೆ ತಮ್ಮ ನೆಚ್ಚಿನ ಶಾಟ್ ಹೊಡೆಯಲು ಹೆಚ್ಚು ಅವಕಾಶ ನೀಡಲಿಲ್ಲ. ಅದರಲ್ಲೂ ವಿಶೇಷವಾಗಿ ವೇಗಿ ಟಿಮಲ್ ಮಿಲ್ಸ್ ಬೌಲಿಂಗ್ ಗೆ ಭಾರತೀಯರು ಸಂಪೂರ್ಣವಾಗಿ ತಡಬಡಾಯಿಸಿದರು. ಸುರೇಶ್ ರೈನಾ ತಮ್ಮ ಆಟಕ್ಕೆ ಕುದುರಿಕೊಳ್ಳುತ್ತಿರುವಾಗಲೇ ಲೆಗ್ ಸೈಡ್ ಗೆ ಬಂದ ಬಾಲ್ ಜಡ್ಜ್ ಮಾಡಲು ವಿಫಲರಾಗಿ ಬೌಲ್ಡ್ ಆದರು.

ಹೆಚ್ಚು ಶಾರ್ಟ್ ಬಾಲ್ ಗಳನ್ನು ಹಾಕಿ ಭಾರತೀಯ ಬ್ಯಾಟ್ಸ್ ಮನ್ ಗಳನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದ ಶ್ರೇಯ ಇಂಗ್ಲೆಂಡ್ ಬೌಲರ್ ಗಳಿಗೆ ಸೇರಬೇಕು. ದ್ವಿತೀಯ ಸರದಿಯಲ್ಲಿ ಇಬ್ಬನಿ ಅಂಶ ಭಾರತದ ಸ್ಪಿನ್ನರ್ ಗಳಿಗೆ ಇನ್ನಷ್ಟು ಕಷ್ಟವಾಗಬಹುದೇನೋ. ಏನೇ ಆದರೂ ಗೆಲುವು ಅಷ್ಟೊಂದು ಸುಲಭವಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ