ವಿರಾಟ್ ಕೊಹ್ಲಿಯ ಹೊಸ ರೂಪ ನೋಡಿದ ಅಭಿಮಾನಿಗಳು!

ಕೃಷ್ಣವೇಣಿ ಕೆ

ಗುರುವಾರ, 9 ಫೆಬ್ರವರಿ 2017 (16:34 IST)
ಹೈದರಾಬಾದ್: ಆರಂಭದಲ್ಲಿ’ ಮುರಳಿ’ಯ ‘ಪೂಜಾ’ಫಲ. ಕೊನೆಗೆ ‘ವಿರಾಟ’ ರೂಪ. ಶ್ರೇಷ್ಠ ಬ್ಯಾಟ್ಸ್ ಮನ್ ಆಡುವ ರೀತಿಯಿಂದಲೇ ಆತ ಇಂದು ಎಷ್ಟು ಹೊತ್ತು ಕ್ರೀಸ್ ನಲ್ಲಿ ಆಡಬಹುದೆಂದು ಲೆಕ್ಕ ಹಾಕಬಹುದು. ಶ್ರೇಷ್ಠರ ಆಟದ ವೈಖರಿಯೇ ಹಾಗಿರುತ್ತದೆ. ಇಂದು ವಿರಾಟ್ ಕೊಹ್ಲಿಯ ಆಟವೂ ಹಾಗಿತ್ತು.

 
ಆಡುತ್ತಿರುವುದು ಬಾಂಗ್ಲಾದೇಶದ ವಿರುದ್ಧವಾದರೂ, ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳಿಗೆ ಈ ಏಕಮಾತ್ರ ಟೆಸ್ಟ್ ಎನ್ನುವುದು ಆತ್ಮ ವಿಶ್ವಾಸ ಹೆಚ್ಚಿಸಲು, ತಮ್ಮ ಹೊಡೆತಗಳನ್ನು ಪರೀಕ್ಷೆಗೊಳಪಡಿಸಲು, ಹೊಸ ಪ್ರಯೋಗ ನಡೆಸಲು ಒಂದು ವೇದಿಕೆಯಂತೆ. ಅದನ್ನು ಟೀಂ ಇಂಡಿಯಾದ ಬ್ಯಾಟ್ಸ್ ಮನ್ ಗಳು ಮೊದಲ ದಿನದ ಆಟದಲ್ಲಿ ಸರಿಯಾಗಿ ಬಳಸಿಕೊಂಡರು.

ಮುರಳಿ ವಿಜಯ್ ಅಂದರೆ ಹಾಗೇ. ಅವರು ಎಷ್ಟೇ ದೊಡ್ಡ ಇನಿಂಗ್ಸ್ ಆಡುವುದಿದ್ದರೂ, ಇತರ ಬ್ಯಾಟ್ಸ್ ಮನ್ ಗಳಂತೆ ಅಬ್ಬರಿಸುವುದಿಲ್ಲ. ಶಾಂತವಾಗಿಯೇ ರನ್ ಗಳಿಸಿ ಹೋಗುವುದು ಎದುರಾಳಿಗಳಿಗೆ ಗೊತ್ತೇ ಆಗುವುದಿಲ್ಲ. ಇಂದೂ ಕೂಡಾ ಅಂತಹದ್ದೇ ಆಟವಾಡಿ ಆರಂಭಿಕರಾಗಿ 9 ನೇ ಶತಕ (108 ರನ್) ದಾಖಲಿಸಿದರು. ಈ ಮೂಲಕ ಭಾರತದ ಪರ ಆರಂಭಿಕರಾಗಿ ಅತೀ ಹೆಚ್ಚು ಶತಕ ಗಳಿಸಿದವರ ಪೈಕಿ ಮೂರನೇ ಸ್ಥಾನ ಗಳಿಸಿದರು.

ಚೇತೇಶ್ವರ ಪೂಜಾರ ಎಂದಿನಂತೆ (83 ರನ್)ತಾಳ್ಮೆಯ ಆಟವಾಡಿದರು. ಮುರಳಿ ಜತೆಗೆ ಶತಕದ ಜತೆಯಾಟವಾಡಿದ ಅವರು ಭಾರತದ ಪರ ಅತೀ ಹೆಚ್ಚು ಜತೆಯಾಟದ ಸರಾಸರಿ (62%) ದಾಖಲೆ ಮಾಡಿದರು. ವಿಶೇಷವೆಂದರೆ ಇಂದು ಕೊಹ್ಲಿ ಆಟದಲ್ಲೂ ಅಬ್ಬರವೇನಿರಲಿಲ್ಲ. ಆದರೆ ಹೆಚ್ಚು ಬಾಲ್ ತಿನ್ನದೆ, ತಮ್ಮ ಮೆಚ್ಚಿನ ಗ್ರೌಂಡ್ ಶಾಟ್ ಗಳನ್ನೆಲ್ಲಾ ಹೊಡೆದರು. ಸಚಿನ್ ತೆಂಡುಲ್ಕರ್ ಟೆಸ್ಟ್ ಕ್ರಿಕೆಟ್ ಪಂದ್ಯವಾಡಿದಂತೆ ಶಾಂತವಾಗಿ, ಸುಲಲಿತವಾಗಿ ಆಡುತ್ತಾ ಚೆಂದದ ಇನಿಂಗ್ಸ್ ಕಟ್ಟಿದರು.

ಅವರು ಇನಿಂಗ್ಸ್ ಆರಂಭಿಸಿದ ರೀತಿಯಿಂದಲೇ ಇಂದು ದೊಡ್ಡ ಮೊತ್ತ ಗ್ಯಾರಂಟಿ ಎನ್ನುವಂತಹ ಆತ್ಮವಿಶ್ವಾಸ ಅವರಲ್ಲಿ ಕಾಣುತ್ತಿತ್ತು. ಬೆಳಗಿನ ಅವಧಿ ಬಿಟ್ಟರೆ ಪಿಚ್ ನಲ್ಲಿ ಬೌಲರ್ ಗಳಿಗೆ ಹೇಳಿಕೊಳ್ಳುವಂತಹ ಪ್ರಯೋಜನ ಸಿಗಲಿಲ್ಲ. ಜತೆಗೆ ಕಳಪೆ ಫೀಲ್ಡಿಂಗ್ ಕೂಡಾ ಸೇರಿ ಬಾಂಗ್ಲಾ ಬೌಲರ್ ಗಳು ಕೊಹ್ಲಿಯಂತಹ ದಿಗ್ಗಜನ ಎದುರು ಯೋಜನೆಯಿಲ್ಲದ ಬೌಲಿಂಗ್  ಮಾಡಿದರು.

ಇದರಿಂದಾಗಿ ಕೊಹ್ಲಿ ಟೆಸ್ಟ್ ಜೀವನದ 16 ನೇ ಶತಕ ದಾಖಲಿಸಿದರು. ಇದರೊಂದಿಗೆ ತಾವು ಟೆಸ್ಟ್ ಆಡಿದ ಎಲ್ಲಾ ತಂಡಗಳೆದುರು ಶತಕ ದಾಖಲಿಸಿದ ಸಾಧನೆ ಮಾಡಿದರು. ದಿನದಂತ್ಯಕ್ಕೆ ಭಾರತ ಇಂದು 3 ವಿಕೆಟ್ ನಷ್ಟಕ್ಕೆ 356 ರನ್ ಮಾಡಿತ್ತು. ಅಜಿಂಕ್ಯಾ ರೆಹಾನೆ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ