ಏಕದಿನ ಕ್ರಿಕೆಟ್ ನ ಅದ್ಭುತ ಇನಿಂಗ್ಸ್ ಆಡಿದ ಮ್ಯಾಕ್ಸ್ ವೆಲ್: ಅಫ್ಘಾನ್ ಸೆಮಿಫೈನಲ್ ಕನಸು ಭಗ್ನ
ಬುಧವಾರ, 8 ನವೆಂಬರ್ 2023 (08:20 IST)
ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಅಫ್ಘಾನಿಸ್ತಾನ ವಿರುದ್ಧ ಯಾರೂ ಊಹಿಸಿರದ ರೀತಿಯಲ್ಲಿ ಬಿರುಗಾಳಿಯಂತೆ ಆಡಿದ ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್ ಹೊಸ ಇತಿಹಾಸವನ್ನೇ ಬರೆದಿದ್ದಾರೆ.
ಅಫ್ಘಾನಿಸ್ತಾನ ನೀಡಿದ 292 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 91 7 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿತ್ತು. ಬಹುಶಃ ಈ ಸಂದರ್ಭದಲ್ಲಿ ಆಸೀಸ್ ಗೆಲ್ಲುತ್ತದೆ ಎಂದು ಯಾರೂ ಕನಸಿನಲ್ಲೂ ಊಹಿಸಿರಲಿಲ್ಲ. ಆದರೆ ಗ್ಲೆನ್ ಮ್ಯಾಕ್ಸ್ ವೆಲ್ ಪಂದ್ಯದ ದಿಕ್ಕನ್ನೇ ಬದಲಾಯಿಸಿದರು.
ಕಾಲು ನೋವಾಗಿದ್ದರೂ ಕುಂಟುತ್ತಲೇ ಓಡಾಡುತ್ತಿದ್ದ ಮ್ಯಾಕ್ಸ್ ವೆಲ್ ಬೌಂಡರಿ, ಸಿಕ್ಸರ್ ಗಳ ಮೂಲಕವೇ ಭರ್ಜರಿ 201 ರನ್ ಗಳ ದ್ವಿಶತಕದ ಇನಿಂಗ್ಸ್ ಆಡಿದರು. ಇದು ಏಕದಿನ ವಿಶ್ವಕಪ್ ನಲ್ಲಿ ಚೇಸಿಂಗ್ ಮಾಡುವಾಗ ಬ್ಯಾಟಿಗನೊಬ್ಬ ಗಳಿಸಿದ ಗರಿಷ್ಠ ರನ್ ಆಗಿದೆ. ಒಟ್ಟು 128 ಎಸೆತ ಎದುರಿಸಿದ ಮ್ಯಾಕ್ಸಿ ಕಾಲು ನೋವಿದ್ದರಿಂದ ಕೇವಲ ಬೌಂಡರಿ, ಸಿಕ್ಸರ್ ಗಳಿಂದಲೇ ತಮ್ಮ ಕೆಲಸ ಪೂರ್ತಿ ಮಾಡಿದರು. ಅಫ್ಘಾನಿಸ್ತಾನ ಬೌಲರ್ ಗಳ ಎಸೆತಗಳನ್ನು ಮನಸೋ ಇಚ್ಛೆ ದಂಡಿಸಿದ ಮ್ಯಾಕ್ಸಿ 10 ಸಿಕ್ಸರ್, 21 ಬೌಂಡರಿಗಳ ನೆರವಿನಿಂದ ಅಜೇಯ 201 ರನ್ ಗಳಿಸಿದರು. ಬಹುಶಃ ಪೆವಿಲಿಯನ್ ನಲ್ಲದ್ದ ಆಸೀಸ್ ಆಟಗಾರರೂ ಇನ್ನು ಸೋಲು ಗ್ಯಾರಂಟಿ ಎಂದು ಮುಖ ಮಾಡಿದ್ದರು. ಆದರೆ ಮ್ಯಾಕ್ಸಿ ಇನಿಂಗ್ಸ್ ಎಲ್ಲರ ನಿರೀಕ್ಷೆಯನ್ನೇ ಹುಸಿ ಮಾಡಿತು. ವಿಶೇಷವೆಂದರೆ ಇನ್ನೊಂದು ತುದಿಯಲ್ಲಿ ಮ್ಯಾಕ್ಸ್ ವೆಲ್ ಗೆ ಸಾಥ್ ಕೊಟ್ಟ ನಾಯಕ ಪ್ಯಾಟ್ ಕ್ಯುಮಿನ್ಸ್ 68 ಎಸೆತ ಎದುರಿಸಿ ಗಳಿಸಿದ್ದು 12 ರನ್! ಇದು ಏಕದಿನ ಇತಿಹಾಸದಲ್ಲೇ ಅತ್ಯದ್ಭುತ ಇನಿಂಗ್ಸ್ ಆಗಿ ದಾಖಲಾಯಿತು.
ಅಂತಿಮವಾಗಿ ಆಸ್ಟ್ರೇಲಿಯಾ 46.5 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 293 ರನ್ ಗಳಿಸುವ ಮೂಲಕ ನಂಬಲಸಾಧ್ಯ ಗೆಲುವು ಸಾಧಿಸಿತು. ಆಸೀಸ್ ನ ಈ ಗೆಲುವಿನೊಂದಿಗೆ ಅಫ್ಘಾನಿಸ್ತಾನದ ಸೆಮಿಫೈನಲ್ ಕನಸು ಭಗ್ನವಾಯಿತು.