ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಗೆ ಈ ಪಾಟಿ ಸಿಟ್ಟು ಬಂದಿದ್ದೇಕೆ?!
ಸೋಮವಾರ, 26 ಮಾರ್ಚ್ 2018 (07:02 IST)
ನವದೆಹಲಿ: ಟೀಂ ಇಂಡಿಯಾ ಕ್ರಿಕೆಟಿಗ ಹರ್ಭಜನ್ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಮೇಲೆ ಸಿಟ್ಟಾಗಿದ್ದಾರೆ. ಇದಕ್ಕೆ ಕಾರಣ ಆಸ್ಟ್ರೇಲಿಯಾ ಮತ್ತು ದ.ಆಫ್ರಿಕಾ ನಡುವೆ ನಡೆದ ಪಂದ್ಯದಲ್ಲಿ ಆದ ಬಾಲ್ ಟೆಂಪರಿಂಗ್ ಘಟನೆ.
ಹಿಂದೊಮ್ಮೆ ಇದೇ ಆಸೀಸ್ ತಂಡದ ವಿರುದ್ಧ ಜನಾಂಗೀಯ ನಿಂದನೆ ಮಾಡಿದ್ದರು ಎಂಬ ಆರೋಪಕ್ಕೊಳಗಾಗಿದ್ದ ಹರ್ಭಜನ್ ಸಿಂಗ್ ಇದೀಗ ಆಸೀಸ್ ಆಟಗಾರರ ವಿಚಾರದಲ್ಲಿ ಐಸಿಸಿ ನಡೆದುಕೊಂಡ ರೀತಿಗೆ ಸಿಟ್ಟಾಗಿದ್ದಾರೆ.
ಬಾಲ್ ಟೆಂಪರಿಂಗ್ ಮಾಡಿದ್ದಕ್ಕೆ ಆಸೀಸ್ ನಾಯಕ ಸ್ಮಿತ್ ಗೆ ಒಂದು ಪಂದ್ಯದ ನಿಷೇಧ ಮತ್ತು ಶೇ.100 ರಷ್ಟು ಪಂದ್ಯದ ಸಂಭಾವನೆಯಲ್ಲಿ ದಂಡದ ಶಿಕ್ಷೆಯನ್ನು ಐಸಿಸಿ ನೀಡಿದೆ. ಹಾಗಿದ್ದರೂ ಹರ್ಭಜನ್ ಐಸಿಸಿ ತಾರತಮ್ಯ ಮಾಡಿದೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಭಜಿ ‘ವಾವ್ ಐಸಿಸಿ. ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ಕಾನೂನಾ? ದ.ಆಫ್ರಿಕಾದಲ್ಲಿ 2001 ರಲ್ಲಿ ನಾವು ಹೆಚ್ಚು ಬಾರಿ ಅಪೀಲ್ ಮಾಡಿದೆವೆಂದು 6 ಮಂದಿಗೆ ನಿಷೇಧ ಹೇರಿದ್ರಿ? ಈಗ್ಯಾಕೆ ಚೆಂಡು ವಿರೂಪಗೊಳಿಸಿದ ಬ್ಯಾನ್ ಕ್ರಾಫ್ಟ್ ಗೆ ನಿಷೇಧವಿಲ್ಲ? 2008 ರ ಸಿಡ್ನಿ ಟೆಸ್ಟ್ ಘಟನೆ ನಿಮಗೆ ನೆನಪಿಲ್ಲವೇ? ತಪ್ಪು ಮಾಡದೆಯೂ 3 ಪಂದ್ಯಕ್ಕೆ ನಿಷೇಧ ಹೇರಿದಿರಿ. ಈಗ ಬೇರೆ ಬೇರೆ ವ್ಯಕ್ತಿಗಳಿಗೆ ಬೇರೆ ಬೇರೆ ನಿಯಮ’ ಎಂದು ಕಿಡಿಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ