ಟೀಂ ಇಂಡಿಯಾದ ಎದುರು ನಿಲ್ಲಲು ಬಾಂಗ್ಲಾ ಬ್ಯಾಟ್ಸ್ ಮನ್ ಗಳಿಗೆ ಧೈರ್ಯ ಬಂದಿದ್ದು ಹೇಗೆ ಗೊತ್ತಾ?
ಶನಿವಾರ, 11 ಫೆಬ್ರವರಿ 2017 (16:45 IST)
ಹೈದರಾಬಾದ್: ಟೆಸ್ಟ್ ಕ್ರಿಕೆಟ್ ಅಂದರೆ ಹಾಗೆ. ಇಲ್ಲಿ ಕ್ರೀಸ್ ನಲ್ಲಿ ನೀವು ಎಷ್ಟು ಜಾಸ್ತಿ ಹೊತ್ತು ಕಳೆಯುತ್ತೀರೋ ಅಷ್ಟು ನಿಮಗೆ ಯಶಸ್ಸು ಸಿಗುವುದು. ಬಾಂಗ್ಲಾದೇಶದ ಹಿರಿಯ ಆಟಗಾರ ಶಕೀಬ್ ಅಲ್ ಹಸನ್ ಮಾಡಿದ್ದೂ ಅದನ್ನೇ.
ಅವರು ಇಂದು ಭಾರತದ ಖ್ಯಾತ ಬೌಲರ್ ಗಳನ್ನು ಆರಂಭದಲ್ಲಿ ಆದಷ್ಟು ಎದುರಿಸಿ ಅಭ್ಯಾಸ ಮಾಡಿದರು. ಸತತವಾಗಿ ರಕ್ಷಣಾತ್ಮಕವಾಗಿ ಆಡುತ್ತಾ ಭಾರತದ ಬೌಲರ್ ಗಳನ್ನು ಅಭ್ಯಾಸ ಮಾಡಿದರು. ಅದರ ಫಲ ಅವರಿಗೆ ಸಿಕ್ಕಿಯೇ ಬಿಟ್ಟಿತು.
ಹೊತ್ತು ಏರುತ್ತಿದ್ದಂತೆ ಅವರಿಗೆ ಉಮೇಶ್ ಯಾದವ್ ರ ವೇಗ, ಅಶ್ವಿನ್-ಜಡೇಜಾ ಜೋಡಿಯ ಸ್ಪಿನ್ ಸಮಸ್ಯೆಯಾಗಲಿಲ್ಲ. ಯಾವಾಗ ಬಿಡಬೇಕು, ಯಾವಾಗ ಹೊಡೆಯಬೇಕು ಎಂದು ಚೆನ್ನಾಗಿ ಅರಿವಾಯಿತು. ಹೀಗಾಗಿ ಒಂದಾದ ಮೇಲೊಂದು ಬೌಂಡರಿ ಹೊಡೆದರು. ತಂಡವನ್ನು ಸಂಕಷ್ಟದಿಂದ ಮೇಲೆತ್ತಿದರು. ಚುರುಕಾಗಿ ಓಡಿ ರನ್ ಗಳಿಸಿದರು. ಅಂತೂ ಬಾಂಗ್ಲಾದ ಹಿರಿಯ ಆಲ್ ರೌಂಡರ್ ಬೌಲಿಂಗ್ ನಲ್ಲಿ ಮಾಡಲು ಸಾಧ್ಯವಾಗದ ಮ್ಯಾಜಿಕ್ ಬ್ಯಾಟಿಂಗ್ ನಲ್ಲಿ ಮಾಡಿದರು.
ಅವರ ಜತೆ ಸ್ವಲ್ಪ ಹೊತ್ತು ಆಡಿದ ಪರಿಣಾಮವೋ ಏನೋ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಮುಷ್ಫಿಕರ್ ರೆಹಮಾನ್ ಕೂಡಾ ಜಿಗುಟಿನ ಆಟವಾಡಿ ತಂಡವನ್ನು ಫಾಲೋ ಆನ್ ಸಂಕಟದಿಂದ ಪಾರು ಮಾಡಲು ಹೋರಾಡುತ್ತಿದ್ದಾರೆ. ಹಾಗೆ ನೋಡಿದರೆ ಬಾಂಗ್ಲಾ ಇಂದು ಉತ್ತಮವಾಗಿ ಬ್ಯಾಟಿಂಗ್ ಮಾಡಿತು. ಶಕೀಬ್ 82 ರನ್ ಗಳಿಸಿ ಔಟಾದರೆ, ರೆಹಮಾನ್ 81 ರನ್ ಮತ್ತು ಮೆಹದಿ ಹಸನ್ 51 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಅಶ್ವಿನ್ ಬೌಲಿಂಗ್ ನಲ್ಲಿ ಎಂದಿನಂತೆ ತಿರುವು ಪಡೆಯಲಿಲ್ಲ. ಇದರಿಂದ ಅವರನ್ನು ಎದುರಿಸುವುದು ಬ್ಯಾಟ್ಸ್ ಮನ್ ಗಳಿಗೆ ಕಷ್ಟವಾಗಲಿಲ್ಲ. ಇಂಗ್ಲೆಂಡ್ ವಿರುದ್ಧ ಕೊನೆಯ ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲೂ ಅಶ್ವಿನ್ ವಿಕೆಟ್ ಪಡೆಯಲು ಹೆಣಗಾಡಿದ್ದರು. ಇದು ಆಸ್ಟ್ರೇಲಿಯಾ ಸರಣಿಗೆ ಸಜ್ಜಾಗುತ್ತಿರುವ ಭಾರತಕ್ಕೆ ಶುಭ ಸೂಚನೆಯಂತೂ ಅಲ್ಲ.
ಸದ್ಯ ಬಾಂಗ್ಲಾದೇಶ 365 ರನ್ ಗಳ ಹಿನ್ನಡೆಯಲ್ಲಿದೆ. ಫಾಲೋ ಆನ್ ತಪ್ಪಿಸಲು ಕೇವಲ 35 ರನ್ ಗಳಿಸಿದರೆ ಸಾಕು. ಹಾಗಾಗಿ ಇಂದಿನ ದಿನದಾಟದ ಶ್ರೇಯ ಬಾಂಗ್ಲಾದೇಶಕ್ಕೇ ಸಲ್ಲಬೇಕು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ