ಕ್ರಿಸ್ ಕೇನ್ಸ್ ನೇರ ಆದೇಶದಿಂದ ಮ್ಯಾಚ್ ಫಿಕ್ಸಿಂಗ್ ಮಾಡಿದೆ : ಲೌ ವಿನ್ಸೆಂಟ್

ಮಂಗಳವಾರ, 13 ಅಕ್ಟೋಬರ್ 2015 (17:31 IST)
ನ್ಯೂಜಿಲೆಂಡ್ ಮಾಜಿ ಕ್ರಿಕೆಟರ್ ಲೌ ವಿನ್ಸೆಂಟ್ ಲಂಡನ್ ಕೋರ್ಟ್‌ರೂಂನಲ್ಲಿ ಸಾಕ್ಷ್ಯ ನುಡಿಯುತ್ತಾ ನಾಯಕ ಕ್ರಿಸ್ ಕೇರ್ನ್ಸ್ ಅವರ ನೇರ ಆದೇಶದಡಿ ತಾವು ಮ್ಯಾಚ್ ಫಿಕ್ಸ್ ಮಾಡಲು ನೆರವಾಗಿದ್ದಾಗಿ ಸೋಮವಾರ ತಪ್ಪೊಪ್ಪಿಕೊಂಡಿದ್ದಾರೆ. ಇದರಿಂದಾಗಿ ಐಸಿಎಲ್ ಪಂದ್ಯಾವಳಿಯಲ್ಲಿ ಕ್ರೀಸ್ ಕೇನ್ಸ್  ಅವರ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ದೃಢಪಟ್ಟಿದೆ.  ಕೇನ್ಸ್ ಅವರ ವಿಚಾರಣೆ ಸಂದರ್ಭದಲ್ಲಿ 2008ರಲ್ಲಿ ಐಸಿಎಲ್‌ನಲ್ಲಿ ಚಂದೀಗಢ್ ಲಯನ್ಸ್ ಪರ ಆಡುವಾಗ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಭಾಗಿಯಾಗುವಂತೆ ಕೇನ್ಸ್ ಮನವೊಲಿಸಿದರು ಎಂದು ವಿನ್ಸೆಂಟ್ ಸಾಕ್ಷ್ಯ ನುಡಿದಿದ್ದಾರೆ. 
 
 ನಾನು ಕ್ರಿಸ್ ಕೇನ್ಸ್ ಅವರ ನೇರ ಆದೇಶವನ್ನು ಸ್ವೀಕರಿಸಿ ಫಿಕ್ಸಿಂಗ್‌ನಲ್ಲಿ ಭಾಗಿಯಾದೆ ಎಂದು ವಿನ್ಸೆಂಟ್ ತಿಳಿಸಿದರು.  ಕೇನ್ಸ್ ತಮಗೆ  ಕಳಪೆ ಪ್ರದರ್ಶನ ನೀಡಲು 50,000 ಡಾಲರ್ ಪ್ರತಿ ಪಂದ್ಯಕ್ಕೂ ನೀಡುವುದಾಗಿ ಭರವಸೆ ನೀಡಿದ್ದರೆಂದು ವಿನ್ಸೆಂಟ್ ಹೇಳಿದ್ದಾರೆ.
 
 ಆದರೆ ನ್ಯೂಜಿಲೆಂಡ್ ನಾಯಕ ಕ್ರಿಸ್ ಕೇನ್ಸ್ ಮಾತ್ರ ತಮ್ಮ ವಿರುದ್ಧ ಆರೋಪವನ್ನು ನಿರಾಕರಿಸಿದ್ದರು.  ಲಲಿತ್ ಮೋದಿ ಟ್ವಿಟರ್‌ನಲ್ಲಿ ಕೇನ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಮಾಡಿದ್ದರಿಂದ  ಕೇನ್ಸ್ ಲಲಿತ್ ಮೋದಿ ವಿರುದ್ಧ ಹಾಕಿದ್ದ 1.4 ದಶಲಕ್ಷ ಡಾಲರ್  ಮಾನಹಾನಿ ಪ್ರಕರಣದಲ್ಲಿ  ಜಯಗಳಿಸಿದ್ದರು. ಆದರೆ ಈ ಪ್ರಕರಣದಲ್ಲಿ ಅವರು ಸುಳ್ಳುಹೇಳಿದ್ದಾರೆಂದು ಆರೋಪವನ್ನು ಈಗವರು ಹೊತ್ತಿದ್ದಾರೆ. 
 
 ತಾವು ಗ್ಯಾಂಗ್ ಭಾಗವಾಗಿದ್ದಾಗ ಮಾನಸಿಕ ಆರೋಗ್ಯ ಸಮಸ್ಯೆಗಳು ಮತ್ತು ಖಿನ್ನತೆಯಿಂದ ನರಳುತ್ತಿದ್ದೆ ಎಂದು ವಿನ್ಸೆಂಟ್ ತಿಳಿಸಿದ್ದಾರೆ. ಆ ಗ್ಯಾಂಗ್‌ನಲ್ಲಿ ನ್ಯೂಜಿಲೆಂಡ್ ಡೆರಿಲ್ ಟಫಿ ಮತ್ತು ಭಾರತದ ಮಾಜಿ ಬ್ಯಾಟ್ಸ್‌ಮನ್ ದಿನೇಶ್ ಮಾಂಗಿಯಾ ಕೂಡ ಇದ್ದರು ಎಂದು ವಿನ್ಸೆಂಟ್ ಹೇಳಿದರು. 
 

ವೆಬ್ದುನಿಯಾವನ್ನು ಓದಿ