ಬಿಸಿಸಿಐಗೆ ಕ್ಯಾರೇ ಎನ್ನದೆ ಹೊಸ ಹಣಕಾಸು ನೀತಿ ರೂಪಿಸಲು ಹೊರಟ ಐಸಿಸಿ! ಇನ್ನೇನು ಕಾದಿದೆಯೋ?
ಭಾನುವಾರ, 5 ಫೆಬ್ರವರಿ 2017 (07:30 IST)
ದುಬೈ: ಐಸಿಸಿಯಲ್ಲಿ ಎಲ್ಲವೂ ಬಿಸಿಸಿಐ ಹೇಳದಂತೆ ನಡೆಯೋಲ್ಲ. ನೀವೇನು ಮಾಡ್ತೀರೋ ಮಾಡಿಕೊಳ್ಳಿ. ನಾವು ಮಾಡೋದನ್ನು ಮಾಡಿಯೇ ತೀರುತ್ತೇವೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಗೆ ತಿರುಗೇಟು ನೀಡಲು ಐಸಿಸಿ ಸಜ್ಜಾಗಿದೆ.
ದುಬೈನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ಸಭೆಯಲ್ಲಿ ಬಿಸಿಸಿಐ ವಿರೋಧದ ಹೊರತಾಗಿಯೂ ಹೊಸ ಹಣಕಾಸು ನೀತಿಗೆ ಅಂಕಿತ ಹಾಕಲು ಹೊರಟಿದೆ. ಹೊಸ ಹಣಕಾಸು ನೀತಿಯಿಂದ ಬಿಸಿಸಿಐ ಜೇಬಿಗೆ ಕತ್ತರಿ ಬೀಳಬಹುದೆಂದು ಇದಕ್ಕೆ ಅದು ತೀವ್ರ ವಿರೋಧ ಮಾಡುತ್ತಲೇ ಬಂದಿತ್ತು.
ಆದರೆ ಇದಕ್ಕೆ ಸೊಪ್ಪು ಹಾಕದೇ ತನ್ನದೇ ಹಾದಿಯಲ್ಲಿ ನಡೆಯಲು ಭಾರತದ ಶಶಾಂಕ್ ಮನೋಹರ್ ನೇತೃತ್ವದ ಐಸಿಸಿ ತೀರ್ಮಾನಿಸಿದೆ. ಐಸಿಸಿ ಸಭೆಯಲ್ಲಿ ಬಹುತೇಕ ಸದಸ್ಯರು ಹೊಸ ಹಣಕಾಸು ವಿಧೇಯಕದ ಪರ ಮತ ಹಾಕಿದ್ದಾರೆ. ಇದರಿಂದಾಗಿ ಐಸಿಸಿಗೆ ಆನೆ ಬಲ ಬಂದಂತಾಗಿದೆ. ಆದರೆ ನಿರೀಕ್ಷೆಯಂತೆ ಹೊಸದಾಗಿ ನೇಮಕಗೊಂಡ ಬಿಸಿಸಿಐ ಆಡಳಿತ ಮಂಡಳಿ ಪ್ರತಿನಿಧಿ ವಿಕ್ರಮ್ ಲಿಮಾಯೆ ಇದಕ್ಕೆ ವಿರುದ್ಧವಾಗಿ ಮತ ಹಾಕಿರುವುದಾಗಿ ಹೇಳಿಕೊಂಡಿದ್ದಾರೆ.
ಈಗಾಗಲೇ ಬಿಸಿಸಿಐ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಪ್ರಮುಖ ಟೂರ್ನಿಗಳನ್ನು ಬಹಿಷ್ಕರಿಸುವ ಬೆದರಿಕೆಯೊಡ್ಡಿದೆ. ಅತ್ತ ಐಸಿಸಿ ತೀರ್ಮಾನದ ಪೂರ್ಣ ಪ್ರಮಾಣದ ಪ್ರತಿ ಓದಿದ ನಂತರ ಮುಂದಿನ ಕ್ರಮದ ಬಗ್ಗೆ ಚಿಂತಿಸುವುದಾಗಿ ಲಿಮಾಯೆ ಹೇಳಿಕೊಂಡಿದ್ದಾರೆ. ಅಂತೂ ಭಾರತದ ಅಭಿಮಾನಿಗಳಿಗಂತೂ ಗಂಡಾಂತರ ಕಾದಿರುವುದಂತೂ ನಿಜ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ