ಭಾರತ ವಿಶ್ವಕಪ್ ಗೆದ್ರೆ ಉಚಿತ ಸೇವೆ ಎಂದ ಬಡ ಚಾಲಕ

ಶನಿವಾರ, 7 ಮಾರ್ಚ್ 2015 (15:39 IST)
ಭಾರತದಲ್ಲಿ ಕ್ರಿಕೆಟ್‌ ಎಂದರೆ ಪ್ರಾಣ ಬಿಡುವಷ್ಟು ಅಭಿಮಾನಿಗಳಿದ್ದಾರೆ. ಅಂತೆಯೇ ಚೆನ್ನೈನಲ್ಲೂ ಒಬ್ಬ ಅಭಿಮಾನಿ ಇದ್ದಾರೆ. ವೃತ್ತಿಯಿಂದ ಆಟೋ ಚಾಲಕರಾಗಿರುವ ಅವರು ಪ್ರಸ್ತುತ ವಿಶ್ವಕಪ್‌ನಲ್ಲಿ ಭಾರತ ವಿಶ್ವಕಪ್‌ ಟ್ರೋಫಿ ಗೆದ್ದರೆ 2 ದಿನ ಉಚಿತವಾಗಿ ಸಾರ್ವಜನಿಕರಿಗಾಗಿ ಆಟೋ ಓಡಿಸುವುದಾಗಿ ತಿಳಿಸಿದ್ದಾರೆ.

ಹೊಸದೊಂದು ರೀತಿಯಲ್ಲಿ ತಮ್ಮ ಅಭಿಮಾನ ಮರೆಯಲುಮುಂದಾಗಿದ್ದಾರೆ. ಸ್ಪೀಡ್‌ ಮುರುಗೇಶ್‌ ಎಂದರೆ ಚೆನ್ನೈ ಸಿಟಿಯಲ್ಲಿ ಖ್ಯಾತಿ. 30 ವರ್ಷದ ಅವರು ಚೆನ್ನೈನ ಗ್ರಿಮ್ಸ್‌ ರೋಡ್‌ನ‌ಲ್ಲಿ ವಾಹನ ಚಲಾಯಿಸುತ್ತಾರೆ. ಬಾಲ್ಯದಿಂದಲೂ ಕ್ರಿಕೆಟ್‌ ಬಗ್ಗೆ ಅತೀವ ಅಭಿಮಾನ ಇಟ್ಟುಕೊಂಡವರು. ಟೀಂ ಇಂಡಿಯಾದ ಸಾಧನೆಗಾಗಿ ಏನಾದರೂ ಮಾಡಲೇಬೇಕು ಎಂದು ಅಂದುಕೊಳ್ಳುತ್ತಿದ್ದರು. ಈಗ ಸಮಯ ಹತ್ತಿರವಿದೆ. ಟೀಂ ಇಂಡಿಯಾ ಕಪ್‌ ಉಳಿಸಿಕೊಂಡಿದ್ದೇ ಆದರೆ ಹೇಳಿದ್ದನ್ನು ಮಾಡಿಯೇ ತೀರುತ್ತೇನೆ ಎಂದು ಶಪಥ ಮಾಡಿದ್ದಾರೆ.

ಹಣಕಾಸಿನ ತೊಂದರೆ ಬಾರದು: 2 ದಿನ ನಗರದಲ್ಲಿ ಉಚಿತವಾಗಿ ಆಟೋ ಓಡಿಸುವುದೆಂದರೆ ಸಾಮಾನ್ಯವಾ? ಅದರಲ್ಲೂ ಇಂಧನ ದರ ನೋಡಿದರೆ ಮೂರ್ಛೆ ತಪ್ಪೋದು ಗ್ಯಾರಂಟಿ. ಹಾಗಾಗಿ ನಿಮ್ಮಿಂದ ಅದು ಕಷ್ಟ ಆಗಬಹುದು ಎಂದರೆ ಮುರುಗೇಶ್‌ ಕೊಡುವ ಉತ್ತರ ಬೇರೆ. ದಿನವೊಂದಕ್ಕೆ ಸಾವಿರ ಒಮ್ಮೊಮ್ಮೆ ಅದಕ್ಕಿಂತ ಹೆಚ್ಚು ದುಡಿಯುತ್ತೇನೆ. ಖರ್ಚು ಕಳೆದು ರೂ.700ರಷ್ಟು ಹಣವನ್ನು ಉಳಿಸುತ್ತೇನೆ. ಹೀಗಾಗಿ ಎರಡು ದಿನ ಟೀಂ ಇಂಡಿಯಾದ ಸಾಧನೆಗೆ ಸೇವೆ ಮಾಡುವುದರಿಂದ ನನ್ನ ಜೀವನಕ್ಕೆ ಯಾವುದೇ ತೊಂದರೆ ಆಗದು ಎಂದು ಅವರು ಹೇಳುತ್ತಾರೆ.

2011ರಲ್ಲೂ ಇದೇ ರೀತಿ ಚಾಲೆಂಜ್‌ ಮಾಡಿದ್ದರು. ನುಡಿದಂತೆ ನಡೆದಿದ್ದರು. ತಮಿಳುನಾಡು ಕ್ರಿಕೆಟ್‌ ಸಂಸ್ಥೆ ಇವರಿಗೆ 1 ಲಕ್ಷ ರೂ. ನೀಡಿತ್ತು. ಅದೇ ಹಣದಿಂದ ಅವರು ಸ್ವಂತ ರಿಕ್ಷಾ ಕೊಂಡುಕೊಂಡಿದ್ದರು.

ವೆಬ್ದುನಿಯಾವನ್ನು ಓದಿ