ಮುಂಬೈ: ಮಹಿಳೆಯರ ಏಕದಿನ ವಿಶ್ವಕಪ್ ಪಂದ್ಯಾವಳಿಯಲ್ಲಿ ಇಂದು ಸೆಮಿಫೈನಲ್ ಹಂತದ ಪಂದ್ಯದಲ್ಲಿ ಭಾರತ ವನಿತೆಯರು, ಆಸ್ಟ್ರೇಲಿಯಾವನ್ನು ಎದುರಿಸಲಿದ್ದಾರೆ. ಆದರೆ ಇಂದಿನ ಪಂದ್ಯ ನಡೆಯುವುದೇ ಕಷ್ಟವಾಗಿದೆ.
ಪ್ರಯಾಸಪಟ್ಟು ಸೆಮಿಫೈನಲ್ ತಲುಪಿರುವ ಭಾರತಕ್ಕೆ ಈಗ ಪ್ರಬಲ ಎದುರಾಳಿಯನ್ನು ಸೋಲಿಸುವ ತಲೆನೋವು. ಯಾವುದೇ ಐಸಿಸಿ ಕೂಟದಲ್ಲಿ ಇದುವರೆಗೆ ಆಸ್ಟ್ರೇಲಿಯಾವನ್ನು ಸೋಲಿಸುವುದು ಎಲ್ಲಾ ತಂಡಗಳಿಗೂ ಕಬ್ಬಿಣದ ಕಡಲೆಯೇ. ಆಸೀಸ್ ಸೋಲಿಸಿದರೆ ವಿಶ್ವಕಪ್ ಗೆದ್ದಂತೆಯೇ.
ಆದರೆ ಈಗಾಗಲೇ ಲೀಗ್ ಹಂತದಲ್ಲಿ ಭಾರತ ಒಮ್ಮೆ ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಇದೀಗ ನಿರ್ಣಾಯಕ ಹಂತದಲ್ಲಿ ಆಸ್ಟ್ರೇಲಿಯಾವನ್ನು ಎದುರಿಸಬೇಕಿದೆ. ಈ ಪಂದ್ಯ ನವಿ ಮುಂಬೈ ಮೈದಾನದಲ್ಲಿ ನಡೆಯಲಿದೆ. ಇಲ್ಲಿ ಈಗಾಗಲೇ ಕಳೆದ ಎರಡೂ ಪಂದ್ಯಗಳನ್ನು ಸತತವಾಗಿ ಟೀಂ ಇಂಡಿಯಾ ಗೆದ್ದಿದೆ.
ಆದರೆ ಈ ಪಂದ್ಯಕ್ಕೆ ವರುಣನ ಆತಂಕವಿದೆ. ಇಂದಿನ ಹವಾಮಾನ ವರದಿ ಪ್ರಕಾರ ಇಂದು ಲಘು ಮಳೆಯಾಗುವ ಸಾಧ್ಯತೆಯಿದೆ. ಹೀಗಾದಲ್ಲಿ ಕೆಲವು ಓವರ್ ಗಳು ನಷ್ಟವಾಗಬಹುದು. ಇದು ನಾಕೌಟ್ ಹಂತವಾಗಿರುವುದರಿಂದ ಇಂದಿನ ದಿನ ಒಂದೇ ಒಂದು ಓವರ್ ಪಂದ್ಯ ನಡೆಸಲಾಗದೇ ಇದ್ದರೆ ನಾಳೆ ಮೀಸಲು ದಿನ ಪಂದ್ಯ ನಡೆಯಲಿದೆ. ಆ ದಿನವೂ ಮಳೆ ಬಂದು ಆಟ ಸಾಧ್ಯವಾಗದೇ ಇದ್ದಲ್ಲಿ ಲೀಗ್ ಹಂತದ ಪಂದ್ಯಗಳ ರನ್ ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಫೈನಲ್ ಗೆ ಅರ್ಹತೆ ಪಡೆಯಲಿದೆ.