ಮೆಲ್ಬೊರ್ನ್: ಆಸ್ಟ್ರೇಲಿಯಾ ನೆಲದಲ್ಲಿ ಶತಕ ಗಳಿಸುವುದು ಅಷ್ಟು ಸುಲಭವಲ್ಲ. ಆದರೆ ಭಾರತ ಈ ಬಾರಿ ಆಸೀಸ್ ಪ್ರವಾಸದಲ್ಲಿ ಹೊಸ ತಾರೆಯನ್ನು ಕಂಡುಕೊಂಡಿದೆ. ಇಂದು ನಿತೀಶ್ ಕುಮಾರ್ ರೆಡ್ಡಿ ಎಂಬ ಯುವ ಪ್ರತಿಭೆ ಶತಕ ಸಿಡಿಸುವಾಗ ಇಡೀ ಮೈದಾನವೇ ಖುಷಿಯಿಂದ ಕಣ್ಣೀರು ಹಾಕಿದೆ.
ಒಂದು ಹಂತದಲ್ಲಿ ಭಾರತ 250 ರನ್ ಗಳೊಳಗೆ ಆಲೌಟ್ ಆಗುವ ಭೀತಿಯಿತ್ತು. ಆದರೆ ನಿತೀಶ್ ಕುಮಾರ್ ರೆಡ್ಡಿ ಸಂಕಷ್ಟದ ಸಮಯದಲ್ಲಿ ಮತ್ತೊಮ್ಮೆ ಭಾರತದ ಪಾಲಿಗೆ ಆಪತ್ ಬಾಂಧವರಾದರು. ಕೆಳ ಕ್ರಮಾಂಕದಲ್ಲಿ ಅದೂ ತಂಡ ಸಂಕಷ್ಟದಲ್ಲಿರುವಾಗ ಬ್ಯಾಟಿಂಗ್ ಬಂದು ಶತಕ ಸಿಡಿಸಿ ಎಲ್ಲರೂ ಹೆಮ್ಮೆಯಿಂದ ಚಪ್ಪಾಳೆ ತಟ್ಟುವಂತೆ ಮಾಡಿದರು.
ನಿತೀಶ್ 85 ರನ್ ಗಳಿಸಿದ್ದಾಗ ಭಾರತ 7 ವಿಕೆಟ್ ಕಳೆದುಕೊಂಡಿತ್ತು. ಆಗ ಮಳೆ ಬಂದಿದ್ದರಿಂದ ಕೆಲವು ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಇದಾಗಿ ಪಂದ್ಯ ಶುರುವಾದ ಮೇಲೆ 50 ರನ್ ಗಳಿಸಿ ವಾಷಿಂಘ್ಟನ್ ಸುಂದರ್ ವಿಕೆಟ್ ಒಪ್ಪಿಸಿದರು. ಆಗ ನಿತೀಶ್ ಎದೆಯಲ್ಲಿ ಢವ ಢವ ಶುರುವಾಗಿತ್ತು.
ವಿಪರ್ಯಾಸವೆಂದರೆ ನಂತರ ಬಂದ ಬುಮ್ರಾ ಕೂಡಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಈ ವೇಳೆ ನಿತೀಶ್ 99 ರನ್ ಗಳಿಸಿ ನಾನ್ ಸ್ಟ್ರೈಕರ್ ಎಂಡ್ ನಲ್ಲಿದ್ದರು. ಮೊಹಮ್ಮದ್ ಸಿರಾಜ್ ಬ್ಯಾಟಿಂಗ್ ಗೆ ಬಂದಿದ್ದರು. ಪ್ಯಾಟ್ ಕ್ಯುಮಿನ್ಸ್ ಬೆಂಕಿ ಚೆಂಡು ಎಸೆಯುತ್ತಿದ್ದರು. ಸಿರಾಜ್ ಮೂರು ಬಾಲ್ ಎದುರಿಸಬೇಕಿತ್ತು. ಭಾರತೀಯ ಡ್ರೆಸ್ಸಿಂಗ್ ರೂಂ, ನಿತೀಶ್ ಕುಮಾರ್ ರೆಡ್ಡಿ, ಕಾಮೆಂಟೇಟರ್ಸ್, ಮೈದಾನದಲ್ಲಿದ್ದ ಪ್ರೇಕ್ಷಕರು ಮತ್ತು ಟಿವಿ ವೀಕ್ಷಿಸುತ್ತಿದ್ದ ಕೋಟ್ಯಾಂತರ ವೀಕ್ಷಕರ ಎದೆಯಲ್ಲಿ ಆಗಲೇ ಲಬ್ ಡಬ್ ಶುರುವಾಗಿತ್ತು.
ಅದೃಷ್ಟವಶಾತ್ ಸಿರಾಜ್ ಆ ಮೂರೂ ಎಸೆತಗಳನ್ನು ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದರು. ಓವರ್ ಮುಗಿದಾಗ ಸಿರಾಜ್ ಅರ್ಧಶತಕ ಗಳಿಸಿದವರಂತೆ ನಿಟ್ಟುಸಿರು ಬಿಟ್ಟರು. ಮುಂದಿನ ಓವರ್ ನಲ್ಲಿ ನಿತೀಶ್ ಗೆ ಸ್ಟ್ರೈಕ್ ಸಿಕ್ಕಿತ್ತು. ಮೊದಲ ಎರಡು ಎಸೆತವನ್ನು ಡಿಫೆಂಡ್ ಮಾಡಿದ ಅವರು ನಂತರದ ಎಸೆತದಲ್ಲಿ ಬೌಂಡರಿ ಗಳಿಸುವ ಮೂಲಕ ಚೊಚ್ಚಲ ಶತಕ ಗಳಿಸಿಯೇ ಬಿಟ್ಟರು. ಮೈದಾನದಲ್ಲಿದ್ದ ಅವರ ತಂದೆಯ ಖುಷಿಯಿಂದ ಕಣ್ಣೀರು ಹಾಕಿದರು. ಸ್ವತಃ ನಿತೀಶ್ ಭಾವುಕರಾಗಿದ್ದು ಕಂಡುಬಂತು. ಜೊತೆಗೆ ಇಡೀ ಮೈದಾನದೇ ಖುಷಿಯಿಂದ ಹುಚ್ಚೆದ್ದು ಕುಣಿಯಿತು. ಇಂತಹದ್ದೊಂದು ಭಾವನಾತ್ಮಕ ಸನ್ನಿವೇಶದೊಂದಿಗೆ ಎಂದೆಂದಿಗೂ ನೆನಪಿನಲ್ಲುಳಿಯುವಂತಹ ಶತಕವನ್ನು ನಿತೀಶ್ ಪೂರ್ತಿ ಮಾಡಿಯೇ ಬಿಟ್ಟಿದ್ದರು. ಇದೀಗ ಭಾರತ 9 ವಿಕೆಟ್ ನಷ್ಟಕ್ಕೆ 358 ರನ್ ಗಳಿಸಿದ್ದು, ಇನಿಂಗ್ಸ್ ಹಿನ್ನಡೆಯನ್ನು 116 ರನ್ ಗೆ ಬಂದು ನಿಂತಿದೆ.