IND vs BAN Test: ಇಷ್ಟು ದಿನದ ಹತಾಶೆ ಒಂದೇ ಇನಿಂಗ್ಸ್ ನಲ್ಲಿ ತೀರಿಸಿದ ಕೆಎಲ್ ರಾಹುಲ್

Krishnaveni K

ಸೋಮವಾರ, 30 ಸೆಪ್ಟಂಬರ್ 2024 (16:39 IST)
Photo Credit: X
ಕಾನ್ಪುರ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಭಾರತ ಮೊದಲ ಇನಿಂಗ್ಸ್ ನಲ್ಲಿ ಬಿರುಸಿನ ಆಟಕ್ಕೆ ಕೈ ಹಾಕಿದ್ದು ಕೆಎಲ್ ರಾಹುಲ್ ಭರ್ಜರಿ ಅರ್ಧಶತಕದ ಮೂಲಕ ಟೀಕಾಕಾರರಿಗೆ ಉತ್ತರ ಕೊಟ್ಟಿದ್ದಾರೆ.

ಮೊದಲ ಟೆಸ್ಟ್ ಪಂದ್ಯದಲ್ಲಿ ರಾಹುಲ್ ಪ್ರದರ್ಶನ ಉತ್ತಮವಾಗಿರಲಿಲ್ಲ. ಈ ಪಂದ್ಯದಲ್ಲಿ ಅವರು ಮಿಸ್ ಫೀಲ್ಡ್ ನಿಂದಾಗಿಯೂ ರಾಹುಲ್ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಮಳೆಯ ಅಡಚಣೆಯ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಭಾರತಕ್ಕೆ ವೇಗವಾಗಿ ರನ್ ಗಳಿಸುವ ಅಗತ್ಯವಿದ್ದಾಗ ರಾಹುಲ್ ತಂಡದ ಅಗತ್ಯಕ್ಕೆ ತಕ್ಕಂತೆ ಆಡಿದರು.

ಇಂದಿನ ಅವರ ಇನಿಂಗ್ಸ್ ನಲ್ಲಿ ಎಂದಿನ ಆತ್ಮವಿಶ್ವಾಸ ಎದ್ದು ಕಾಣುತ್ತಿತ್ತು. ಕೇವಲ 43 ಎಸೆತ ಎದುರಿಸಿರುವ ಅವರು 68  ರನ್ ಗಳಿಸಿ ಔಟಾದರು. ಇದರಲ್ಲಿ ಒಂದು ಸಿಕ್ಸರ್, 7 ಬೌಂಡರಿ ಕೂಡಾ ಸೇರಿದೆ. ಕೊಹ್ಲಿ ಜೊತೆಗೂಡಿ ಉತ್ತಮ ಜೊತೆಯಾಟವಾಡಿದ ರಾಹುಲ್ ತಂಡಕ್ಕೆ ಮುನ್ನಡೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೆ ಮೊದಲು ರೋಹಿತ್ ಶರ್ಮಾ-ಯಶಸ್ವಿ ಜೈಸ್ವಾಲ್ ತಂಡಕ್ಕೆ ಸ್ಪೋಟಕ ಆರಂಭ ನೀಡಿದರು. ಆದರೆ ದುರದೃಷ್ಟವಶಾತ್ ರೋಹಿತ್ 23 ರನ್ ಗಳಿಗೆ ಔಟಾದರೆ, ಜೈಸ್ವಾಲ್ 51 ಎಸೆತಗಳಲ್ಲಿ 72 ರನ್ ಗಳಿಸಿ ಔಟಾದರು. ಮಧ್ಯಮ ಕ್ರಮಾಂಕದಲ್ಲಿ ಶುಬ್ಮನ್ ಗಿಲ್ 39 ರನ್ ಗಳಿಸಿದರೂ ಅದು ಟಿಪಿಕಲ್ ಟೆಸ್ಟ್ ಇನಿಂಗ್ಸ್ ಆಗಿತ್ತು. ಕಳೆದ ಪಂದ್ಯದ ಹೀರೋ ರಿಷಬ್ ಪಂತ್ ಇಂದು ಕೇವಲ 9 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇನ್ನೊಂದೆಡೆ ವಿರಾಟ್ ಕೊಹ್ಲಿಯೂ ಉತ್ತಮ ಆರಂಭ ಪಡೆದರೂ 47 ರನ್ ಗಳಿಗೆ ವಿಕೆಟ್ ಒಪ್ಪಿಸಿ ನಿರಾಸೆ ಅನುಭವಿಸಿದರು. ಅಂತಿಮವಾಗಿ ಭಾರತ 9 ವಿಕೆಟ್ ನಷ್ಟಕ್ಕೆ 285 ರನ್ ಗಳಿಸಿ 52 ರನ್ ಗಳ ಇನಿಂಗ್ಸ್ ಮುನ್ನಡೆಯೊಂದಿಗೆ ಡಿಕ್ಲೇರ್ ಮಾಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ