ರಾಂಚಿ: ಟೀಂ ಇಂಡಿಯಾ ಯುವ ವಿಕೆಟ್ ಕೀಪರ್ ಬ್ಯಾಟಿಗ ಧ್ರುವ್ ಜುರೆಲ್ ತನಗೆ ಸಿಕ್ಕ ಅವಕಾಶವನ್ನು ಸರಿಯಾಗಿಯೇ ಬಳಸಿಕೊಂಡಿದ್ದಾರೆ. ನಾಲ್ಕನೇ ಪಂದ್ಯದ ಎರಡೂ ಇನಿಂಗ್ಸ್ ಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ.
ರಾಂಚಿಯಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಧ‍್ರುವ್ ಬಾಲಂಗೋಚಿಗಳನ್ನು ಕಟ್ಟಿಕೊಂಡು ಹೋರಾಡಿ 90 ರನ್ ಗಳಿಸದೇ ಹೋಗಿದ್ದರೆ ಟೀಂ ಇಂಡಿಯಾ ಈ ಪಂದ್ಯ ಸೋಲಬೇಕಾಗಿತ್ತು. ದ್ವಿತೀಯ ಇನಿಂಗ್ಸ್ ನಲ್ಲಿ ಶುಬ್ಮನ್ ಗಿಲ್ ಗೆ ಸಾಥ್ ನೀಡದೇ ಹೋಗಿದ್ದರೆ ಭಾರತಕ್ಕೆ ಸೋಲು ಖಚಿತವಾಗಿತ್ತು. ಆದರೆ ಎರಡೂ ಇನಿಂಗ್ಸ್ ಗಳಲ್ಲಿ ಆಪತ್ಬಾಂಧವನಂತೆ ಆಡಿದ ಧ‍್ರುವ್ ಜುರೆಲ್ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ಗಿದ್ದ ದೊಡ್ಡ ತಲೆನೋವು ನಿವಾರಿಸಿದೆ.
ಇಶಾನ್ ಕಿಶನ್ ರಾಷ್ಟ್ರೀಯ ತಂಡಕ್ಕೆ ಕೈಕೊಟ್ಟಾಗ ಕೆಎಸ್ ಭರತ್ ಗೆ ಟೆಸ್ಟ್ ತಂಡದಲ್ಲಿ ಕೀಪಿಂಗ್ ಹೊಣೆ ನೀಡಲಾಗಿತ್ತು. ಆದರೆ ಭರತ್ ಬ್ಯಾಟಿಂಗ್ ನಲ್ಲಿ ದಯನೀಯ ವೈಫಲ್ಯ ಅನುಭವಿಸಿದ್ದರು. ಕೀಪಿಂಗ್ ಕೂಡಾ ಅಷ್ಟಕ್ಕಷ್ಟೇ ಎನ್ನುವಂತಾಗಿತ್ತು. ಹೀಗಾಗಿ ಕೆಲವರು ಇಶಾನ್ ರನ್ನು ಹೇಗಾದರೂ ಮಾಡಿ ಮರಳಿ ಕರೆಸಬೇಕು ಎಂದು ಹೇಳಲು ಶುರು ಮಾಡಿದ್ದರು. ಆದರೆ ತನ್ನ ಮಾತು ಕೇಳದ ಇಶಾನ್ ಗೆ ಮಣೆ ಹಾಕಲು ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ರೆಡಿ ಇರಲಿಲ್ಲ. ಹೀಗಾಗಿ ಧ್ರುವ್ ಜುರೆಲ್ ಗೆ ಅವಕಾಶ ಕೊಟ್ಟಿತು. ಜುರೆಲ್ ಇದನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ.
ಇದೀಗ ಧ್ರುವ್ ರಾಂಚಿ ಟೆಸ್ಟ್ ಇನಿಂಗ್ಸ್ ಮೂಲಕ ಇಬ್ಬರ ವೃತ್ತಿ ಜೀವನವನ್ನು ಖತಂಗೊಳಿಸಿದ್ದಾರೆ. ಜುರೆಲ್ ಕೀಪಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಮಿಂಚಿರುವುದರಿಂದ ಈಗ ಕೆಎಸ್ ಭರತ್ ಗೆ ಅವಕಾಶ ಸಿಗುವುದು ಅನುಮಾನವಾಗಿದೆ. ಅತ್ತ ಬಿಸಿಸಿಐ ಮಾತನ್ನೇ ಧಿಕ್ಕರಿಸಿ ದುರಹಂಕಾರ ತೋರಿದ ಇಶಾನ್ ಕಿಶನ್ ಗೂ ಇನ್ನು ಟೆಸ್ಟ್ ತಂಡದ ಬಾಗಿಲು ತೆಗೆಯದು. ಅಲ್ಲಿಗೆ ಧ್ರುವ್ ಟೀಂ ಇಂಡಿಯಾ ಮ್ಯಾನೇಜ್ ಮೆಂಟ್ ತಲೆನೋವು ಕಡಿಮೆ ಮಾಡಿದ್ದಲ್ಲದೆ, ಇಬ್ಬರ ವೃತ್ತಿ ಜೀವನವನ್ನೇ ಕೊನೆಗೊಳಿಸಿದ್ದಾರೆ.