ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವಿಗೆ ನಾಳೆಯವರೆಗೆ ಕಾಯಬೇಕಾಗಿದೆ.
ಇಂದು ಧ‍್ರುವ್ ಜುರೆಲ್ ಸಾಹಸದಿಂದಾಗಿ ಭಾರತ ಮೊದಲ ಇನಿಂಗ್ಸ್ ನಲ್ಲಿ 307 ರನ್ ಗಳಿಗೆ ಆಲೌಟ್ ಆಯಿತು. ಒಂದು ಹಂತದಲ್ಲಿ 7 ವಿಕೆಟ್ ಕಳೆದುಕೊಂಡು 150 ಪ್ಲಸ್ ರನ್ ಹಿನ್ನಡೆಯಲ್ಲಿದ್ದ ಭಾರತಕ್ಕೆ ಜೀವ ನೀಡಿದ್ದು ಧ್ರುವ್ ಭರ್ಜರಿ ಆಟ. 90 ರನ್ ಸಿಡಿಸಿದ ಅವರು ಕೊನೆಯವರಾಗಿ ಔಟಾದರು. ಆದರೆ ಶತಕ ಗಳಿಸಲಾಗದೇ ನಿರಾಸೆ ಅನುಭವಿಸಿದರು. ಹಾಗಿದ್ದರೂ ಅವರ ಈ ಇನಿಂಗ್ಸ್ ಯಾವ ಶತಕಕ್ಕೂ ಕಡಿಮೆಯಿಲ್ಲ ಎನ್ನುವಂತಿತ್ತು.
ದ್ವಿತೀಯ ಇನಿಂಗ್ಸ್ ನಲ್ಲಿ 56 ರನ್ ಗಳ ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ಗೆ ರವಿಚಂದ್ರನ್ ಅಶ್ವಿನ್-ಕುಲದೀಪ್ ಯಾದವ್ ಜೋಡಿ ಮಾರಕವಾಗಿ ಪರಿಣಮಿಸಿದರು. ಅಶ್ವಿನ್ 5 ವಿಕೆಟ್ ಗಳ ಗೊಂಚಲು ಪಡೆದರೆ ಕುಲದೀಪ್ 4 ವಿಕೆಟ್ ಪಡೆದರು. ಉಳಿದೊಂದು ವಿಕೆಟ್ ಜಡೇಜಾ ಪಾಲಾಯಿತು. ಈ ಮೂಲಕ ಎಲ್ಲಾ ವಿಕೆಟ್ ಗಳೂ ಸ್ಪಿನ್ನರ್ ಗಳ ಪಾಲಾಯಿತು. ಅಂತಿಮವಾಗಿ ಇಂಗ್ಲೆಂಡ್ ಕೇವಲ 145 ರನ್ ಗಳಿಗೆ ಆಲೌಟ್ ಆಯಿತು.
ಮೊದಲ ಇನಿಂಗ್ಸ್ ಹಿನ್ನಡೆ ಸೇರಿದಂತೆ ಭಾರತಕ್ಕೆ ಈಗ ಗೆಲ್ಲಲು 192 ರನ್ ಗಳ ಗುರಿ ಸಿಕ್ಕಿದೆ. ಇಂದಿನ ದಿನದಂತ್ಯಕ್ಕೆ ಎಚ್ಚರಿಕೆಯ ಆಟವಾಡಿದ ಆರಂಭಿಕರಾದ ರೋಹಿತ್ ಶರ್ಮಾ-ಯಶಸ್ವಿ ಜೈಸ್ವಾಲ್ ಜೋಡಿ 40 ರನ್ ಗಳಿಸಿದೆ. ಈ ಪೈಕಿ ರೋಹಿತ್ 24, ಜೈಸ್ವಾಲ್ 16 ರನ್ ಗಳಿಸಿದ್ದಾರೆ. ಭಾರತ ಇದೀಗ ಗೆಲ್ಲಲು 152 ರನ್ ಗಳಿಸಬೇಕಿದೆ. ಹೀಗಾಗಿ ನಾಲ್ಕನೇ ದಿನಕ್ಕೆ ಟೀಂ ಇಂಡಿಯಾ ಗೆಲುವು ನಿಶ್ಚಿತವಾಗಿದೆ.