IND vs ENG test: ಜೋ ರೂಟ್ ಶತಕ, 300 ದಾಟಿದ ಇಂಗ್ಲೆಂಡ್

Krishnaveni K

ಶುಕ್ರವಾರ, 23 ಫೆಬ್ರವರಿ 2024 (17:05 IST)
Photo Courtesy: Twitter
ರಾಂಚಿ: ಭಾರತ ಮತ್ತು ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಮೊದಲ ದಿನದಂತ್ಯಕ್ಕೆ ಮೊದಲ ಇನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 302 ರನ್ ಗಳಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತ್ತು. ಆದರೆ ಭಾರತದ ಪರ ಚೊಚ್ಚಲ ಪಂದ್ಯವಾಡುತ್ತಿರುವ ಆಕಾಶ್ ಸಿಂಗ್ ಆರಂಭದಲ್ಲೇ ಮೂರು ವಿಕೆಟ್ ಕಿತ್ತು ಆಘಾತ ನೀಡಿದರು. ಬಳಿಕ ಇಂಗ್ಲೆಂಡ್ ಗೆ ಜೋ ರೂಟ್ ಆಸರೆಯಾದರು. ಸರಣಿಯಲ್ಲಿ ಇಷ್ಟು ದಿನ ಕಳೆಗುಂದಿದ್ದ ಜೋ ರೂಟ್ ಇಂದು ಅದ್ಭುತ ಶತಕ ಸಿಡಿಸುವ ಮೂಲಕ ಫಾರ್ಮ್ ಗೆ ಬಂದಿದ್ದಲ್ಲದೆ ತಂಡಕ್ಕೆ ಆಸರೆಯಾದರು. ಜಾನಿ ಬೇರ್ ಸ್ಟೋ ಜೊತೆ ಅರ್ಧಶತಕದ  ಜೊತೆಯಾಟವಾಡಿದ ಜೋ ರೂಟ್ ತಂಡಕ್ಕೆ ಆರಂಭಿಕ ಆಘಾತದಿಂದ ಚೇತರಿಕೆ ನೀಡಿದರು.

ಒಟ್ಟು 226 ಎಸೆತ ಎದುರಿಸಿರುವ ಜೋ ರೂಟ್ ಇದೀಗ 106 ರನ್ ಗಳಿಸಿ ನಾಳೆಗೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ. ಇದುವರೆಗೆ ಬೀಡು ಬೀಸಾದ ಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಎಂದಿನ ಟೆಸ್ಟ್ ಮಾದರಿಯ ಬ್ಯಾಟಿಂಗ್ ಮಾಡಿತು. ಬೆನ್ ಸ್ಟೋಕ್ ವಿಕೆಟ್ ಕಳೆದುಕೊಂಡ ಬಳಿಕ ಜೋ ರೂಟ್ ಗೆ ಜೊತೆಯಾದ ಬೆನ್ ಫೋಕ್ಸ್ 47 ರನ್ ಗಳ ಕೊಡುಗೆ ನೀಡಿದ್ದಲ್ಲದೆ ಶತಕದ ಜೊತೆಯಾಟವಾಡಿದರು. ಇದೀಗ ಜೋ ರೂಟ್ ಗೆ ತಕ್ಕ ಸಾಥ್ ನೀಡುತ್ತಿರುವ ಒಲಿ ರಾಬಿನ್ಸನ್ 31 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ.

ಭಾರತದ ಪರ ವೇಗಿ ಆಕಾಶ್‍ ದೀಪ್ 3, ಮೊಹಮ್ಮದ್ ಸಿರಾಜ್ 2 ವಿಕೆಟ್ ಕಬಳಿಸಿದರು. ಜಸ್ಪ್ರೀತ್ ಬುಮ್ರಾ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದಿರುವ ಆಕಾಶ್ ದೀಪ್ ಅದನ್ನು ಸಮರ್ಥಿಸುವಂತೆ ಬೌಲಿಂಗ್ ಮಾಡಿದರು. ಸ್ಪಿನ್ನರ್ ಗಳ ಪಿಚ್ ಎಂದು ಹೇಳಲಾಗಿದ್ದರೂ ವೇಗಿಗಳು ಯಶಸ್ಸು ಪಡೆದಿದ್ದು ವಿಶೇಷ. ಉಳಿದಂತೆ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ  ತಲಾ 1 ವಿಕೆಟ್ ಕಬಳಿಸಿದರು. ವಿಶೇಷವೆಂದರೆ ಯಶಸ್ವಿ ಜೈಸ್ವಾಲ್ ಕೂಡಾ ಒಂದು ಓವರ್ ಬೌಲಿಂಗ್ ಮಾಡಿ ಗಮನ ಸೆಳೆದರು. ಕುಲದೀಪ್ ಯಾದವ್ ಗೆ ಇಂದು ಯಶಸ್ಸು ದಕ್ಕಲಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ