ದುಬೈ: ಭಾರತ ಮತ್ತು ಪಾಕಿಸ್ತಾನ ನಡುವಿನ ಏಷ್ಯಾ ಕಪ್ ಕ್ರಿಕೆಟ್ ಪಂದ್ಯದ ವೇಳೆ ಟೀಂ ಇಂಡಿಯಾ ಆಟಗಾರರು ಎದುರಾಳಿಗಳ ಕೈ ಕುಲುಕದೇ ಇರುವ ಬಗ್ಗೆ ಕೊನೆಗೂ ಬಿಸಿಸಿಐ ಸ್ಪಷ್ಟನೆಯೊಂದನ್ನು ಕೊಟ್ಟಿದೆ.
ನಿನ್ನೆಯ ಪಂದ್ಯದಲ್ಲಿ ಟೀಂ ಇಂಡಿಯಾ ಆಟಗಾರರು ಗೆಲುವಿನ ಬಳಿಕ ಪಾಕ್ ಆಟಗಾರರ ಕೈ ಕುಲುಕದೇ ಡ್ರೆಸ್ಸಿಂಗ್ ರೂಂ ಬಾಗಿಲು ಹಾಕಿಕೊಂಡರು ಎಂಬ ವಿಚಾರ ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ಬಗ್ಗೆ ನಾಯಕ ಸೂರ್ಯಕುಮಾರ್ ಯಾದವ್ ಸ್ಪಷ್ಟನೆಯನ್ನೂ ಕೊಟ್ಟಿದ್ದಾರೆ.
ನಮಗೆ ಕ್ರೀಡಾ ಮನೋಭಾವಕ್ಕಿಂತ ದೇಶ ದೊಡ್ಡದು. ಇದು ನಾವೆಲ್ಲರೂ ಸೇರಿ ಮಾಡಿದ್ದ ತೀರ್ಮಾನ ಎಂದಿದ್ದರು. ಇದೀಗ ಸ್ವತಃ ಬಿಸಿಸಿಐ ಅಧಿಕಾರಿಗಳೇ ಈ ವಿವಾದಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ. ಜೊತೆಗೆ ಟೀಂ ಇಂಡಿಯಾವನ್ನು ಸಮರ್ಥಿಸಿದ್ದಾರೆ.
ಪಂದ್ಯದ ಬಳಿಕ ಕೈ ಕುಲುಕುವುದು ನಿಯಮಾವಳಿಗೆ ಸಂಬಂಧಿಸಿದ್ದಲ್ಲ. ಇದು ಎಲ್ಲಾ ತಂಡಗಳೂ ಒಳ್ಳೆಯ ಭಾವನೆಯಿಂದ ಪಾಲಿಸಿಕೊಂಡು ಬಂದ ಪದ್ಧತಿಯಷ್ಟೇ. ಆದರೆ ನಮಗೀಗ ಸಂಬಂಧ ಹಳಸಿರುವ ಒಂದು ರಾಷ್ಟ್ರದೊಂದಿಗೆ ಕೈ ಕುಲುಕಿ ಶುಭಾಶಯ ವಿನಿಮಯ ಮಾಡುವ ಮನಸ್ಥಿತಿಯಿಲ್ಲ. ಹೀಗಾಗಿಯೇ ನಾವು ಕೈ ಕುಲುಕಿಲ್ಲ. ಇದು ನಿಯಮಕ್ಕೆ ವಿರುದ್ಧವೂ ಅಲ್ಲ ಎಂದು ಬಿಸಿಸಿಐನಿಂದ ಸ್ಪಷ್ಟನೆ ಬಂದಿದೆ. ಟೀಂ ಇಂಡಿಯಾ ಆಟಗಾರರು ಕೈ ಕುಲುಕಿಲ್ಲ ಎಂದು ಪಾಕಿಸ್ತಾನ ಐಸಿಸಿಗೆ ದೂರು ನೀಡಿದೆ. ಈ ಹಿನ್ನಲೆಯಲ್ಲಿ ಬಿಸಿಸಿಐ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.