ಸೆಮಿಫೈನಲ್‌ನಲ್ಲಿ ಭಾರತ 233ಕ್ಕೆ ಆಲೌಟ್: ಗೆದ್ದ ಆಸ್ಟ್ರೇಲಿಯಾ ಫೈನಲ್ ಪ್ರವೇಶ

ಗುರುವಾರ, 26 ಮಾರ್ಚ್ 2015 (17:03 IST)
ಸಿಡ್ನಿ: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಸಿಡ್ನಿಯ ಮೈದಾನದಲ್ಲಿ ನಡೆಯುತ್ತಿದ್ದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾದ 328 ರನ್ ಬೆನ್ನೆತ್ತಿದ ಭಾರತ 233 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲಪ್ಪಿದೆ. ಒಂದು ಹಂತದಲ್ಲಿ 108 ರನ್‌ಗೆ 4 ವಿಕೆಟ್ ಕಳೆದುಕೊಂಡಿದ್ದ ಭಾರತ ಪಾಳೆಯದಲ್ಲಿ ಧೋನಿ ಮತ್ತು ರಹಾನೆ ಜೊತೆಯಾಟದಿಂದ ಗೆಲುವಿನ ಭರವಸೆಯ ಮಿಂಚು ಮೂಡಿತ್ತು.

ಆದರೆ ರಹಾನೆ 178 ರನ್‌ಗಳಾಗಿದ್ದಾಗ, ಸ್ಟಾರ್ಕ್‌ ಬೌಲಿಂಗ್‌ನಲ್ಲಿ ಹ್ಯಾಡಿಂಗ್‌ಗೆ ಕ್ಯಾಚಿತ್ತು ಔಟಾದ ಬಳಿಕ ಧೋನಿ ರನ್‌ಗಳನ್ನು ಮುಂದಕ್ಕೆ ಒಯ್ದರಾದರೂ ಧೋನಿ 44 ನೇ ಓವರಿನಲ್ಲಿ ರನೌಟ್ ಆಗಿದ್ದು, ಭಾರತದ ಸೋಲಿಗೆ ಮುನ್ನುಡಿ ಬರೆಯಿತು.  ಧೋನಿ ಔಟಾದ ಬಳಿಕ ಉಳಿದ ಆಟಗಾರರು ಸ್ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಬೇಗನೇ ಔಟಾಗಿದ್ದರಿಂದ ಭಾರತ 233 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡು ಸೋಲನ್ನಪ್ಪಿದೆ. ಆಸ್ಟ್ರೇಲಿಯಾ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಿಚೆಲ್ ಜಾನ್ಸನ್ ತಲಾ 2 ವಿಕೆಟ್  ಗಳಿಸಿದರು ಮತ್ತು ಫಾಲ್ಕನರ್ 3 ವಿಕೆಟ್ ಕಬಳಿಸಿದರು. 

 ಭಾರತ ತಂಡ ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡಿದರೂ 76 ರನ್‌ಗಳಾಗಿದ್ದಾಗ ಶಿಖರ್ ಧವನ್ ಔಟಾದ ಬಳಿಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ರೈನಾ ಕೂಡ ಬೇಗನೇ ಔಟಾದರು. 95 ರನ್‌ಗಳಿಂದ ಗೆದ್ದಿರುವ ಆಸ್ಟ್ರೇಲಿಯಾ 29ರಂದು ನ್ಯೂಜಿಲೆಂಡ್ ವಿರುದ್ಧ ಫೈನಲ್ಸ್ ಪಂದ್ಯವನ್ನು ಆಡಲಿದೆ. 

ವೆಬ್ದುನಿಯಾವನ್ನು ಓದಿ