ಮತ್ತೆ ಮುಗ್ಗರಿಸಿದ ಭಾರತ: ಸರಣಿಯಲ್ಲಿ 4-0 ಯಿಂದ ಹಿನ್ನಡೆ

ಬುಧವಾರ, 20 ಜನವರಿ 2016 (17:01 IST)
ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಕ್ಯಾನ್‌ಬೆರಾದಲ್ಲಿ ನಡೆದ ನಾಲ್ಕನೇ ಏಕ ದಿನ ಪಂದ್ಯದಲ್ಲಿ ಕೂಡ ಭಾರತ ಮುಗ್ಗರಿಸಿ ಬಿದ್ದಿದೆ. ಆಸ್ಟ್ರೇಲಿಯಾದ 348 ರನ್ ಉತ್ತರವಾಗಿ ಭಾರತದ ಪರ ಶಿಖರ್ ಧವನ್ ಮತ್ತು ವಿರಾಟ್ ಕೊಹ್ಲಿ ಭರ್ಜರಿ ಬ್ಯಾಟಿಂಗ್ ಆಡಿ ರನ್ ಮೊತ್ತವನ್ನು ಹೆಚ್ಚಿಸಿದ್ದರು. ಒಂದು ಹಂತದಲ್ಲಿ ಭಾರತ 2 ವಿಕೆಟ್ ಕಳೆದುಕೊಂಡು 277 ರನ್ ಗಳಿಸಿ ಗೆಲವು ಭಾರತದ ಬುಟ್ಟಿಗೆ ಬೀಳುವುದೆಂದು ಭಾವಿಸಲಾಗಿತ್ತು.

 ವಿರಾಟ್ ಕೊಹ್ಲಿ ಅವರ 92 ಎಸೆತಗಳಲ್ಲಿ 106 ರನ್ ಮತ್ತು ಶಿಖರ್ ಧವನ್ ಅವರ 113 ಎಸೆತಕ್ಕೆ 126 ರನ್ ನೆರವಿನಿಂದ  ಭಾರತ ಈ ಪಂದ್ಯವನ್ನಾದರೂ ಗೆಲ್ಲುವ ವಿಶ್ವಾಸವನ್ನು ಹೊಂದಿತ್ತು. ಆದರೆ ವಿರಾಟ್ ಕೊಹ್ಲಿ ಮತ್ತು ಶಿಖರ್ ಧವನ್ ಔಟಾದ ಬಳಿಕ ಭಾರತದ ಉಳಿದ ಆಟಗಾರರು ಬೇಗನೇ ಔಟಾಗಿದ್ದರಿಂದ ಕೊಹ್ಲಿ, ಧವನ್ ಭರ್ಜರಿ ಬ್ಯಾಟಿಂಗ್ ವ್ಯರ್ಥವಾಯಿತು.

ಧೋನಿ ಕೂಡ ಸ್ಕ್ರೀಸಿನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಶೂನ್ಯಕ್ಕೆ ಔಟಾದರು.ಉತ್ತಮ ಬ್ಯಾಟ್ಸ್‌ಮನ್ ರಹಾನೆ ಕೂಡ ಔಟಾದರು. ಕೇನ್ ರಿಚರ್ಡ್‌ಸನ್ ಅವರ ವೇಗದ ಬೌಲಿಂಗ್ ದಾಳಿಗೆ ತತ್ತರಿಸಿದ ಭಾರತ 323 ರನ್‌ಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು 25 ರನ್‌ಗಳಿಂದ ಸೋಲಪ್ಪಿದೆ. ಭಾರತದ ಬೌಲಿಂಗ್ ವಿಭಾಗದ ವೈಫಲ್ಯವು ಈ ಪಂದ್ಯದಲ್ಲೂ ಕೂಡ ನಿಚ್ಚಳವಾಗಿ ಕಂಡುಬಂತು.  ಆಸ್ಟ್ರೇಲಿಯಾದ ರನ್ ವೇಗವನ್ನು ನಿಯಂತ್ರಿಸಿದ್ದರೆ ಭಾರತಕ್ಕೆ ಗೆಲ್ಲುವ ಅವಕಾಶವಿತ್ತು. 

ವೆಬ್ದುನಿಯಾವನ್ನು ಓದಿ