ಭಾರತ-ಆಸ್ಟ್ರೇಲಿಯಾ ಟಿ20: ದಾಖಲೆಯ ಮೊತ್ತ ಕಲೆ ಹಾಕಿದ ಟೀಂ ಇಂಡಿಯಾ

ಭಾನುವಾರ, 26 ನವೆಂಬರ್ 2023 (20:55 IST)
ತಿರುವನಂತಪುರಂ: ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿತೀಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಮೊದಲು ಬ್ಯಾಟಿಂಗ್ ಮಾಡಿ ದಾಖಲೆಯ ಮೊತ್ತ ಕಲೆ ಹಾಕಿದೆ.

ಆರಂಭಿಕ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ ವಾಡ್ ಅಬ್ಬರದ ಬ್ಯಾಟಿಂಗ್ ನಿಂದಾಗಿ ಟೀಂ ಇಂಡಿಯಾ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಬರೋಬ್ಬರಿ 235 ರನ್ ಗಳಿಸಿದೆ. ಇದು ಆಸ್ಟ್ರೇಲಿಯಾ ವಿರುದ್ಧ ಟಿ20 ಕ್ರಿಕೆಟ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿ ಗಳಿಸಿದ ಗರಿಷ್ಠ ಮೊತ್ತವಾಗಿದೆ.

ಆರಂಭಿಕರಾಗಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ ಬೀಡು ಬೀಸಾದ ಬ್ಯಾಟಿಂಗ್ ನಡೆಸಿ 25 ಎಸೆತಗಳಲ್ಲಿ 53 ರನ್ ಗಳಿಸಿ ಔಟಾದರು. ಆದರೆ ಇನ್ನೊಂದೆಡೆ ಋತುರಾಜ್ ಗಾಯಕ್ ವಾಡ್ ಕೊನೆಯ ಓವರ್ ವರೆಗೂ ಬ್ಯಾಟಿಂಗ್ ನಡೆಸಿ 43 ಎಸೆತಗಳಿಂದ 58 ರನ್ ಗಳಿಸಿ ಔಟಾದರು. 

ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗಿಳಿದ ಇಶಾನ್ ಕಿಶನ್ ಮತ್ತೊಮ್ಮೆ ಭರ್ಜರಿ ಹೊಡೆತಗಳ ಮೂಲಕ ರಂಜಿಸಿದರು. 32 ಎಸೆತಗಳಲ್ಲಿ 52 ರನ್ ಗಳಿಸಿ ಅವರೂ ಔಟಾದರು. ಈ ಮೂಲಕ ಅಗ್ರ ಕ್ರಮಾಂಕದ ಮೂವರು ಅರ್ಧಶತಕ ಗಳಿಸಿದ ದಾಖಲೆ ಸೃಷ್ಟಿಯಾಯಿತು. ನಾಯಕ ಸೂರ್ಯಕುಮಾರ್ ಯಾದವ್ ಕೇವಲ 19 ರನ್ ಗೆ ವಿಕೆಟ್ ಒಪ್ಪಿಸಿದರು. ಆದರೆ ಫಿನಿಶರ್ ರಿಂಕು ಸಿಂಗ್ ಕೇವಲ 9 ಎಸೆತಗಳಿಂದ 31 ರನ್ ಚಚ್ಚಿದರು. ತಿಲಕ್ ವರ್ಮ ಅಜೇಯ 7 ರನ್ ಗಳಿಸಿದರು. ಈ ಮೂಲಕ ಭಾರತ ಆಸ್ಟ್ರೇಲಿಯಾ ವಿರುದ್ಧ ಗರಿಷ್ಠ ಮೊತ್ತ ದಾಖಲೆ ಮಾಡಿತು. ಆಸಿಸ್ ಪರ ನಥನ್ ಎಲ್ಲಿಸ್ 3, ಮಾರ್ಕಸ್ ಸ್ಟಾಯ್ನಿಸ್ 1 ವಿಕೆಟ್ ಕಬಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ