ಭಾರತ-ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ನಾಳೆಯಿಂದ ಟೆಸ್ಟ್!

ಕೃಷ್ಣವೇಣಿ ಕೆ

ಬುಧವಾರ, 22 ಫೆಬ್ರವರಿ 2017 (13:43 IST)
ಪುಣೆ: ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ ಆಯ್ತು.. ಇದೀಗ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಸವಾರಿ ನಡೆಸಲು ಸಿದ್ಧವಾಗಿದೆ. ನಾಳೆಯಿಂದ ಪುಣೆಯಲ್ಲಿ ಪ್ರಥಮ ಟೆಸ್ಟ್ ಪಂದ್ಯವಾಗಲಿದೆ.

 
ಭಾರತ ಸತತ ಸರಣಿ ಗೆಲುವಿನ ಆತ್ಮ ವಿಶ್ವಾಸದಲ್ಲಿದೆ. ಜತೆಗೆ ತವರಿನಲ್ಲಿ ಆಡುತ್ತಿರುವುದರ ಬಲವಿದೆ. ಪ್ರಮುಖ ಆಟಗಾರರೆಲ್ಲರೂ ಫಿಟ್ ಆಗಿದ್ದಾರೆ. ಇಲ್ಲದೇ ಹೋದರೂ ಟೀಂ ಇಂಡಿಯಾ ಬೆಂಚ್ ಬಲವೂ ಸದೃಢವಾಗಿದೆ. ಒಬ್ಬರಿಲ್ಲದಿದ್ದರೆ ತಂಡವನ್ನು ಆಧರಿಸಲು ಇನ್ನೊಬ್ಬರಿದ್ದಾರೆ.

ಆದರೆ ಹಿಂದಿನ ತಂಡವನ್ನು ಎದುರಿಸಿದಷ್ಟು ಸುಲಭವಲ್ಲ ಆಸ್ಟ್ರೇಲಿಯಾ ಜತೆಗೆ ಎನ್ನುವ ಅರಿವು ವಿರಾಟ್ ಕೊಹ್ಲಿ ಬಳಗಕ್ಕಿದೆ. ಆಸ್ಟ್ರೇಲಿಯನ್ನರಿಗೆ ಇದು ಪ್ರತಿಷ್ಠೆಯ ಕಣ. ಹಾಗಾಗಿ ಸಾಕಷ್ಟು ಹೋಂ ವರ್ಕ್ ಮಾಡಿಕೊಂಡೇ ಆಡಲಿಳಿಯುತ್ತಿದ್ದಾರೆ.

ಅವರಿಗಿರುವ ಒಂದೇ ಚಿಂತೆಯೆಂದರೆ ಕೊಹ್ಲಿ ಮತ್ತು ಭಾರತದ ಸ್ಪಿನ್ ಬಲ. ಇದನ್ನು ಎದುರಿಸುವುದೇ ದೊಡ್ಡ ಚಿಂತೆಯಾಗಿದೆ. ಅದನ್ನು ಹೊರತುಪಡಿಸಿದರೆ ಅವರ ಬ್ಯಾಟಿಂಗ್ ಬಲ ಚೆನ್ನಾಗಿದೆ. ನಾಯಕ ಸ್ಟೀವ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ವಾರ್ನರ್ ಗೆ ಐಪಿಎಲ್ ನಲ್ಲಿ ಆಡಿ ಅನುಭವವಿರುವುದರಿಂದ ಭಾರತದ ಪಿಚ್ ಅಪರಿಚಿತವೇನಲ್ಲ.

ಭಾರತದ ಬ್ಯಾಟಿಂಗ್ ಕೂಡಾ ನೋಡಲು ಬಲಾಢ್ಯವಾಗಿಯೇ ಇದೆ. ಆರಂಭಿಕರು ದೊಡ್ಡ ಮೊತ್ತ ಕಲೆ ಹಾಕಲು ಕಲಿಯಬೇಕಿದೆ. ಮೂರನೇ ಕ್ರಮಾಂಕದಲ್ಲಿ ಪೂಜಾರ ಆಧಾರ ಸ್ತಂಬದಂತಿದ್ದಾರೆ. ಕೊನೆಯ ಕ್ರಮಾಂಕದವರೂ ಚೆನ್ನಾಗಿಯೇ ಆಡುತ್ತಿದ್ದಾರೆ.  ಅಜಿಂಕ್ಯಾ ರೆಹಾನೆ ಬಾಂಗ್ಲಾದೇಶದ ವಿರುದ್ಧ ಉತ್ತಮವಾಗಿ ಆಡಿದ್ದರಿಂದ ಮತ್ತೆ ಸ್ಥಾನ ಪಡೆಯುತ್ತಾರೆ. ಅದರ ಅರ್ಥ ಮತ್ತೊಮ್ಮೆ ತ್ರಿಶತಕ ವೀರ ಕರುಣ್ ನಾಯರ್ ಬೆಂಚ್ ಕಾಯಬೇಕಾಗುತ್ತದೆ.

ಏನೇ ಆದರೂ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯಗಳೆಂದರೆ ರೋಚಕತೆಯಲ್ಲಿ ಪಾಕಿಸ್ತಾನ-ಭಾರತ ಪಂದ್ಯದ ನಂತರದ ಸ್ಥಾನ ಗಳಿಸುತ್ತದೆ. ಅದಕ್ಕೆ ಕಾರಣ ಇತ್ತೀಚೆಗಿನ ಕೆಲವು ವರ್ಷಗಳಲ್ಲಿ ನಡೆದ ಮಾತಿನ ಚಕಮಕಿಗಳು. ಈ ಸರಣಿಯಲ್ಲೂ ಅಂತಹದ್ದೇ ಘಟನೆಗಳು ಮರುಕಳಿಸುತ್ತದಾ? ಪುಸ್ತಕದಲ್ಲಿ ಮೇಲುಗೈ ಹೊಂದಿದವರು ಆಟದಲ್ಲೂ ಮೇಲುಗೈ ಸಾಧಿಸುತ್ತಾರಾ ಎಂದು ಕಾದು ನೋಡಬೇಕು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ