ಪೊಚೆಫ್ ಸ್ಟೊಮ್: ಅಂಡರ್ 19 ವಿಶ್ವಕಪ್ ಕ್ರಿಕೆಟ್ ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೆಮಿಫೈನಲ್ ನಲ್ಲಿ ಸೋಲಿಸಿದ ಭಾರತ ತಂಡ ಫೈನಲ್ ಗೇರಿದೆ.
ಮೊದಲು ಬ್ಯಾಟಿಂಗ್ ಮಾಡಿದ ಪಾಕ್ ಕೇವಲ 172 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪತ ಸುಶಾಂತ್ ಮಿಶ್ರಾ 3, ಕಾರ್ತಿಕ್ ತ್ಯಾಗಿ, ರವಿ ಬಿಶ್ನೋಯ್ ತಲಾ 2 ವಿಕೆಟ್ ಕಬಳಿಸಿದರು. ಯಶಸ್ವಿ ಜೈಸ್ವಾಲ್ ಮತ್ತು ಅಥರ್ವ ತಲಾ 1 ವಿಕೆಟ್ ತಮ್ಮದಾಗಿಸಿಕೊಂಡರು.
ಬೌಲಿಂಗ್ ನಲ್ಲಿ ಮಿಂಚಿದ ಯಶಸ್ವಿ ಜೈಸ್ವಾಲ್ ಕೊನೆಗೆ ಬ್ಯಾಟಿಂಗ್ ನಲ್ಲೂ ಅಬ್ಬರಿಸಿದರು. ಪಾಕ್ ನೀಡಿದ ಸುಲಭ ಮೊತ್ತವನ್ನು ಬೆನ್ನತ್ತಿದ್ದ ಭಾರತ ವಿಕೆಟ್ ನಷ್ಟವಿಲ್ಲದೇ 176 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಜೈಸ್ವಾಲ್ 113 ಎಸೆತಗಳಿಂದ 8 ಬೌಂಡರಿ, 4 ಸಿಕ್ಸರ್ ಗಳನ್ನೊಳಗೊಂಡ 105 ರನ್ ಗಳಿಸಿದರೆ ಅವರಿಗೆ ತಕ್ಕ ಸಾಥ್ ನೀಡಿದ ದಿವ್ಯಾಂಶ್ ಸಕ್ಸೇನಾ ಅಜೇಯ 59 ರನ್ ಗಳಿಸಿದರು. ಒಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಪಾನಿಪೂರಿ ಮಾರುತ್ತಿದ್ದ ಜೈಸ್ವಾಲ್ಗ ಈಗ ನ್ಯಾಷನಲ್ ಸ್ಟಾರ್ ಆಗಿಬಿಟ್ಟಿದ್ದಾರೆ.
ಈ ಮೂಲಕ ಹಾಲಿ ಚಾಂಪಿಯನ್ ಆಗಿರುವ ಭಾರತ 7 ನೇ ಬಾರಿಗೆ ಫೈನಲ್ ಗೆ ಲಗ್ಗೆಯಿಟ್ಟಿತು. ಇದುವರೆಗೆ ಈ ಪೈಕಿ ಒಟ್ಟು ಐದು ಬಾರಿ ಚಾಂಪಿಯನ್ ಆಗಿರುವ ಭಾರತ ಸತತ ಎರಡನೇ ಬಾರಿಗೆ ವಿಶ್ವಕಪ್ ಕಿರೀಟ ಮುಡಿಗೇರಿಸುವ ವಿಶ್ವಾಸದಲ್ಲಿದೆ.