ಬರ್ಮಿಂಗ್ ಹ್ಯಾಮ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಇಂದು ದ್ವಿತೀಯ ಟಿ20 ಪಂದ್ಯ ಬರ್ಮಿಂಗ್ ಹ್ಯಾಮ್ ನಲ್ಲಿ ನಡೆಯಲಿದೆ.
ಇಲ್ಲಿ ಮೊನ್ನೆಯಷ್ಟೇ ಜಸ್ಪ್ರೀತ್ ಬುಮ್ರಾ ನೇತೃತ್ವದ ಟೀಂ ಇಂಡಿಯಾ ಟೆಸ್ಟ್ ಪಂದ್ಯವನ್ನು ಹೀನಾಯವಾಗಿ ಸೋತಿತ್ತು. ಇಂದು ಅದೇ ಮೈದಾನದಲ್ಲಿ ರೋಹಿತ್ ಶರ್ಮಾ ನೇತ್ವತ್ವದ ಟೀಂ ಇಂಡಿಯಾ ಟಿ20 ಪಂದ್ಯವಾಡಲಿದೆ. ಈಗಾಗಲೇ ಮೊದಲ ಪಂದ್ಯವನ್ನು ರೋಹಿತ್ ಪಡೆ ಗೆದ್ದುಕೊಂಡಿದೆ.
ಆದರೆ ಇಂದಿನ ಪಂದ್ಯಕ್ಕೆ ಟೀಂ ಇಂಡಿಯಾ ಬಹುತೇಕ ಬದಲಾವಣೆಯೊಂದಿಗೆ ಕಣಕ್ಕಿಳಿಯುತ್ತಿದೆ. ಹಿರಿಯ ಆಟಗಾರರಾದ ವಿರಾಟ್ ಕೊಹ್ಲಿ, ರಿಷಬ್ ಪಂತ್, ರವೀಂದ್ರ ಜಡೇಜಾ ತಂಡಕ್ಕೆ ಸೇರ್ಪಡೆಯಾಗಿದ್ದಾರೆ. ಕಳೆದ ಪಂದ್ಯದಲ್ಲಿ ಟೀಂ ಇಂಡಿಯಾಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಪಂದ್ಯದಿಂದ ಮತ್ತೆ ರಾಹುಲ್ ದ್ರಾವಿಡ್ ಕೋಚ್ ಆಗಿ ಮುಂದುವರಿಯಲಿದ್ದಾರೆ. ಕೊಹ್ಲಿ, ರಿಷಬ್ ಪಂತ್, ಜಡೇಜಾಗಾಗಿ ಯಾರು ಸ್ಥಾನ ಬಿಟ್ಟುಕೊಡಲಿದ್ದಾರೆ ಎಂದು ಕಾದು ನೋಡಬೇಕಿದೆ. ಈ ಪಂದ್ಯ ರಾತ್ರಿ 10.30 ಕ್ಕೆ ಆರಂಭವಾಗುವುದು.