ಧೋನಿ ತವರಲ್ಲೇ ಸೋತ ಭಾರತ

ಗುರುವಾರ, 27 ಅಕ್ಟೋಬರ್ 2016 (08:46 IST)
ರಾಂಚಿ: ನಾಯಕ ಎಂಎಸ್ ಧೋನಿ ತವರಿನಲ್ಲಿ ಗೆದ್ದು ಭಾರತ ಸರಣಿ ಗೆಲ್ಲುತ್ತದೆಂಬ ಲೆಕ್ಕಾಚಾರ ತಪ್ಪಿ ಹೋಗಿದೆ. ನ್ಯೂಜಿಲೆಂಡ್ ವಿರುದ್ಧ ಭಾರತ ನಾಲ್ಕನೇ ಏಕದಿನ ಪಂದ್ಯ ಸೋತಿದೆ.

ಇದರೊಂದಿಗೆ ಸರಣಿ 2-2 ರಿಂದ ಸಮಬಲವಾಗಿದೆ. ಧೋನಿ ತವರಿನಲ್ಲಿ ಉತ್ತಮ ಆಟವಾಡಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ನ್ಯೂಜಿಲೆಂಡ್ ನೀಡಿದ್ದ 260 ರನ್ ಗಳ ಗುರಿ ಬೆನ್ನತ್ತಿದ್ದ ಭಾರತ ಕೇವಲ 48.4 ಓವರ್ ಗಳಲ್ಲಿ 241 ರನ್ ಗಳಿಗೆ ಆಲೌಟ್ ಆಯಿತು.  ಇದರೊಂದಿಗೆ 19 ರನ್ ಗಳ ಸೋಲನುಭವಿಸಿತು. ಇಲ್ಲಿಯವರೆಗೆ ರಾಂಚಿ ಮೈದಾನದಲ್ಲಿ ಭಾರತ ಒಮ್ಮೆಯೂ ಸೋತಿರಲಿಲ್ಲ.

ಕಳೆದ ಪಂದ್ಯದಲ್ಲಿ ಅಮೋಘ ಆಟವಾಡಿದ್ದ ವಿರಾಟ್ ಕೊಹ್ಲಿ ಆಟ ಈ ಪಂದ್ಯದಲ್ಲಿ 45 ರನ್ ಗಳಿಗೆ ಕೊನೆಯಾಯ್ತು. ತವರಿನ ಹೀರೋ ಧೋನಿ ಕೇವಲ 11 ರನ್ ಗಳಿಗೆ ವಿಕೆಟ್ ಒಪ್ಪಿಸಿದರು. ಇದುವರೆಗೆ ಉತ್ತಮ ಆಟವಾಡಿರದಿದ್ದ ಅಜಿಂಕ್ಯಾ ರೆಹಾನೆ ಈ ಪಂದ್ಯದಲ್ಲಿ ಅರ್ಧ ಶತಕ (57) ರನ್ ಗಳಿಸಿದ್ದು ಬಿಟ್ಟರೆ ಇನ್ಯಾವ ಭಾರತೀಯ ಬ್ಯಾಟ್ಸ್ ಮನ್ ಕೂಡಾ ಕ್ರೀಸಿಗೆ ಅಂಟುವ ಲಕ್ಷಣ ತೋರಲಿಲ್ಲ.

ನ್ಯೂಜಿಲೆಂಡ್ ಪರ ಟಿಮ್ ಸೌಥಿ ಮೂರು, ಬೌಲ್ಟ್ ಮತ್ತು ನೀಶಾಮ್ ತಲಾ ಎರಡು ವಿಕೆಟ್ ಕಬಳಿಸಿದರು. ಸರಣಿಯಲ್ಲಿ ಇನ್ನೊಂದು ಪಂದ್ಯ ಉಳಿದುಕೊಂಡಿದ್ದು, ಅದು ನಿರ್ಣಾಯಕ ಪಂದ್ಯವೆನಿಸಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ