ಶ್ರೀಲಂಕಾದಲ್ಲಿ ಡಿಸೆಂಬರ್‌ನಲ್ಲಿ ನಡೆಯುವ ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿ

ಗುರುವಾರ, 26 ನವೆಂಬರ್ 2015 (18:31 IST)
ಪಾಕಿಸ್ತಾನ ಪ್ರಧಾನಮಂತ್ರಿ ನವಾಜ್ ಷರೀಫ್ ಪಿಸಿಬಿಗೆ ಭಾರತದ ವಿರುದ್ಧ ಶ್ರೀಲಂಕಾದಲ್ಲಿ ಕ್ರಿಕೆಟ್ ಸರಣಿ ಆಡುವುದಕ್ಕೆ ಅನುಮತಿ ನೀಡಿದ್ದಾರೆಂಬ ವರದಿಗಳು ಪ್ರಕಟವಾಗಿ ಕೆಲವೇ ಗಂಟೆಗಳಲ್ಲಿ ಬಿಸಿಸಿಐನ ರಾಜೀವ್ ಶುಕ್ಲಾ ಉಭಯ ರಾಷ್ಟ್ರಗಳ ನಡುವೆ ದ್ವಿಪಕ್ಷೀಯ ಸರಣಿಯು ದ್ವೀಪರಾಷ್ಟ್ರದಲ್ಲಿ ನಡೆಯುತ್ತದೆಂದು ದೃಢಪಡಿಸಿದರು.
 
ಶ್ರೀಲಂಕಾದಲ್ಲಿ ಡಿ. 15ರಿಂದ ಭಾರತ ಪಾಕ್ ಸರಣಿ ಆರಂಭವಾಗಲಿದೆ. ಎರಡೂ ರಾಷ್ಟ್ರಗಳು ಅದಕ್ಕೆ ಒಪ್ಪಿಗೆ ಸೂಚಿಸಿವೆ ಎಂದು ಶುಕ್ಲಾ ಹೇಳಿದ್ದಾರೆ.  ಶ್ರೀಲಂಕಾದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಐದು ಪಂದ್ಯಗಳ ಮೂಲಕ ಕ್ರಿಕೆಟ್ ಬಾಂಧವ್ಯ ಪುನಾರಂಭವಾಗಲಿದೆ ಎಂದು ಅವರು ಹೇಳಿದರು. 
 
ಭಾರತ ಮತ್ತು ಪಾಕ್ ನಡುವೆ ದ್ವಿಪಕ್ಷೀಯ ಕ್ರಿಕೆಟ್ ಪುನಾರಂಭವು ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನತೆ ಉಲ್ಬಣಿಸಿರುವ ನಡುವೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಚರ್ಚೆಗೊಳಗಾದ ವಿಷಯವಾಗಿತ್ತು.  ನಿಗದಿತ ಸರಣಿಯನ್ನು ಡಿಸೆಂಬರ್‌ನಲ್ಲಿ ಎಲ್ಲಿ ನಡೆಸಬೇಕೆಂಬ ಬಗ್ಗೆ ಆಯಾ ಕ್ರಿಕೆಟ್ ಮಂಡಳಿಗಳು ಇಕ್ಕಟ್ಟಿನಲ್ಲಿದ್ದವು. 
 
ಇದಕ್ಕೆ ಮುಂಚೆ ಶರೀಫ್ ತಟಸ್ಥ ಮೈದಾನದಲ್ಲಿ ಭಾರತದ ವಿರುದ್ಧ ಪಾಕ್ ಆಡುವುದಕ್ಕೆ ಪಿಸಿಬಿಗೆ ಒಪ್ಪಿಗೆ ಸೂಚಿಸಿದ್ದರು.  ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಭಾರತೀಯ ಕ್ರಿಕೆಟ್ ಮಂಡಳಿಯು ವಿದೇಶಾಂಗ ವ್ಯವಹಾರ ಸಚಿವಾಲಯಕ್ಕೆ ಔಪಚಾರಿಕ ಮನವಿ ಮಾಡಿ ಪಾಕಿಸ್ತಾನದಲ್ಲಿ ಆಡಲು ಅನುಮತಿ ನೀಡುವಂತೆ ಕೋರಿದ್ದಾಗಿ ತಿಳಿಸಿದರು. ಎಫ್‌ಟಿಪಿಗೆ ನೀಡಿದ ಬದ್ಧತೆಯಂತೆ ಬಿಸಿಸಿಐ ಯುಎಇನಲ್ಲಿ ಅಥವಾ ಯಾವುದೇ ತಟಸ್ಥ ಮೈದಾನದಲ್ಲಿ ಪಾಕಿಸ್ತಾನದ ವಿರುದ್ಧ ಆಡಲು ಬದ್ಧವಾಗಿದೆ ಎಂದು ಠಾಕುರ್ ಪ್ರತಿಪಾದಿಸಿದ್ದರು. 
 

ವೆಬ್ದುನಿಯಾವನ್ನು ಓದಿ