ದಕ್ಷಿಣ ಆಫ್ರಿಕಾ ವಿದೇಶಿ ನೆಲದಲ್ಲಿ 10 ಟೆಸ್ಟ್ ಸರಣಿ ಜಯಗಳಿಸಿದ 9 ವರ್ಷದ ಸತತ ದಾಖಲೆಗೆ ಭಾರತ ಗಂಭೀರ ಅಪಾಯವನ್ನು ಒಡ್ಡಿದೆ. ಉಭಯ ತಂಡಗಳು ನಾಗ್ಪುರದ ಜಾಮ್ತಾದ ವಿಸಿಎ ಕ್ರೀಡಾಂಗಣದಲ್ಲಿ ಮೂರನೇ ಟೆಸ್ಟ್ ಪಂದ್ಯದಲ್ಲಿ ನಾಳೆ ಮುಖಾಮುಖಿಯಾಗಲಿದ್ದು, 2006ರಲ್ಲಿ ಶ್ರೀಲಂಕಾ ವಿರುದ್ಧ 0-2ರಲ್ಲಿ ಸೋತ ಬಳಿಕ ದಕ್ಷಿಣ ಆಫ್ರಿಕಾ ವಿದೇಶದಲ್ಲಿ ಯಾವುದೇ ಟೆಸ್ಟ್ ಸರಣಿಯನ್ನು ಸೋತಿರಲಿಲ್ಲ.
ದಕ್ಷಿಣ ಆಫ್ರಿಕಾದ ಗೆಲವುಗಳಲ್ಲಿ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ 2008-09 ಮತ್ತು 2012-13ರಲ್ಲಿ ಎರಡು ಸರಣಿಗಳಲ್ಲಿ ಗೆಲುವು, ಇಂಗ್ಲೆಂಡ್ , ವೆಸ್ಟ್ ಇಂಡೀಸ್, ನ್ಯೂಜಿಲೆಂಡ್, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಜಿಂಬಾಬ್ವೆ ವಿರುದ್ದ ತಲಾ ಒಂದು ಗೆಲುವುಗಳನ್ನು ಗಳಿಸಿದ್ದರು. ಗಮನಾರ್ಹ ಸಂಗತಿಯೆಂದರೆ,
1996-97ರಲ್ಲಿ ಮತ್ತು 2004-05ರಲ್ಲಿ ದಕ್ಷಿಣ ಆಫ್ರಿಕಾ ಭಾರತ ವಿರುದ್ಧ ಎರಡು ಟೆಸ್ಟ್ ಸರಣಿಗಳಲ್ಲಿ ಕ್ರಮವಾಗಿ 1-2 ಮತ್ತು 0-1ರಿಂದ ಸೋತಿತ್ತು. ಭಾರತ ಸ್ಪಿನ್ಗೆ ನೆರವಾಗುವ ಈ ಪಿಚ್ನಲ್ಲಿ ಪಂದ್ಯವನ್ನು ಗೆದ್ದುಕೊಂಡರೆ, ಭಾರತದ ನೆಲದಲ್ಲಿ 6 ಟೆಸ್ಟ್ ರಬ್ಬರ್ಗಳ ಪೈಕಿ ಮೂರನೇ ಸರಣಿ ಸೋಲನ್ನು ದಕ್ಷಿಣ ಆಫ್ರಿಕಾ ಅನುಭವಿಸಿದಂತಾಗುತ್ತದೆ.