ಜಡೇಜಾ ಭರ್ಜರಿ ಬೌಲಿಂಗ್: ಭಾರತಕ್ಕೆ 108 ರನ್‌ಗಳಿಂದ ಗೆಲುವು

ಶನಿವಾರ, 7 ನವೆಂಬರ್ 2015 (15:57 IST)
ಮೊಹಾಲಿ: ಇಂದು ಮೊಹಾಲಿಯಲ್ಲಿ ನಡೆದ ದಕ್ಷಿಣ ಆಫ್ರಿಕಾ ಮತ್ತು ಭಾರತದ ನಡುವೆ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತದ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ ಅವರ ಅಮೋಘ ಸ್ಪಿನ್ ದಾಳಿಗೆ ದ. ಆಫ್ರಿಕಾ  ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 109 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ಭಾರತ ಪ್ರಥಮ ಟೆಸ್ಟ್‌ನಲ್ಲಿ ಗೆದ್ದು ಸಂಭ್ರಮಿಸಿದೆ.  ಮಾರಕ ಸ್ಪಿನ್ ಎದುರಿಸಲು ವಿಫಲರಾದ ದ.ಆಫ್ರಿಕಾ ಬ್ಯಾಟ್‌ಮನ್‌‍ಗಳು ಒಬ್ಬೊಬ್ಬರಾಗಿ ಪೆವಿಲಿಯನ್ ಹಾದಿ ಹಿಡಿದರು. ಇಂದು ಮೊಹಾಲಿ ಪಿಚ್‌ನಲ್ಲಿ  ಸ್ಪಿನ್ ಬೌಲರುಗಳದ್ದೇ ದರ್ಬಾರು.

ವಿಪರೀತ ಟರ್ನ್ ತೆಗೆದುಕೊಳ್ಳುತ್ತಿದ್ದ ಪಿಚ್‌ನಲ್ಲಿ ಚೆಂಡನ್ನು ಆಡಲು ಬ್ಯಾಟ್ಸ್‌ಮನ್‌ಗಳು ತಿಣುಕಾಡಿ ಕಡೆಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್‌ನತ್ತ ತೆರಳುತ್ತಿದ್ದ ದೃಶ್ಯ ಕಂಡುಬಂತು. ನಂಬರ್ ಒನ್ ಶ್ರೇಯಾಂಕದ ಸ್ಫೋಟಕ  ಬ್ಯಾಟ್ಸ್‌ಮನ್ ಡಿ ವಿಲಿಯರ್ಸ್‌  ಕೂಡ ಮೊಹಾಲಿ ಪಿಚ್‌ನಲ್ಲಿ ಸ್ಪಿನ್‌ಗೆ ಶರಣಾಗಿ ಬೌಲ್ಡ್ ಆದರು. ಚೆಂಡು ಬರುವ ದಿಕ್ಕಿನಲ್ಲಿ ರಕ್ಷಣಾತ್ಮಕವಾಗಿ ಆಡಲು ಹೊರಟರೂ ಕೂಡ ಚೆಂಡು ಬ್ಯಾಟಿನಿಂದ ತಪ್ಪಿಸಿಕೊಂಡು ಹಿಂಭಾಗದಲ್ಲಿ ವಿಕೆಟ್ ಉರುಳಿಸಿರುತ್ತದೆ ಇಲ್ಲವೇ ಬ್ಯಾಟಿನ ತುದಿಗೆ ತಾಗಿ ಸ್ಲಿಪ್‌‌ನಲ್ಲಿ ಫಿಲ್ಡರ್ ಕೈಗೆ ಕ್ಯಾಚ್ ತಲುಪಿರುತ್ತದೆ.

 ಹೀಗಾಗಿ ಮೊಹಾಲಿ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಕಬ್ಬಿಣದ ಕಡಲೆಯಾಗಿ ಪರಿಣಮಿಸಿತು.  ರವೀಂದ್ರ ಜಡೇಜಾ ರಣಜಿ ಪಂದ್ಯದಲ್ಲಿ ತೋರಿದ ತಮ್ಮ ಬೌಲಿಂಗ್ ಚಾಕಚಕ್ಯತೆಯನ್ನು ಟೆಸ್ಟ್ ಪಂದ್ಯದಲ್ಲೂ ತೋರಿಸಿದರು. ಅವರು ಭರ್ಜರಿ ಐದು ವಿಕೆಟ್ ಕಬಳಿಸುವ ಮೂಲಕ ತಾವೂ ಅಶ್ವಿನ್ ರೀತಿಯಲ್ಲಿ ಶ್ರೇಷ್ಟ ಸ್ಪಿನ್ನರ್ ಎಂದು ಸಾಬೀತುಪಡಿಸಿದರು. ಅಶ್ವಿನ್ 3 ವಿಕೆಟ್ ಕಬಳಿಸಿದರು. ನಾಲ್ಕು ಪಂದ್ಯಗಳ ಸರಣಿಯಲ್ಲಿ ಭಾರತ ಈಗ 1-0ಯಿಂದ ಮುನ್ನಡೆ ಸಾಧಿಸಿದೆ. 
 
 ಸ್ಕೋರು ವಿವರ: ಭಾರತ ಮೊದಲ ಇನ್ನಿಂಗ್ಸ್ 201, 2ನೇ ಇನ್ನಿಂಗ್ಸ್ 200
ದ.ಆಫ್ರಿಕಾ ಮೊದಲ ಇನ್ನಿಂಗ್ಸ್  184 ಮತ್ತು ಎರಡನೇ ಇನ್ನಿಂಗ್ಸ್ 109ಕ್ಕೆ ಆಲೌಟ್ 
 108 ರನ್‌ಗಳಿಂದ ಭಾರತಕ್ಕೆ ಜಯ , 2ನೇ ಇನ್ನಿಂಗ್ಸ್‌:  ರವೀಂದ್ರ ಜಡೇಜಾ 5 ವಿಕೆಟ್‌ಗಳು , ಅಶ್ವಿನ್ 3 ವಿಕೆಟ್‌ಗಳು 

ವೆಬ್ದುನಿಯಾವನ್ನು ಓದಿ