ಧೋನಿ ಧಮಾಕ: ವೆಸ್ಟ್ ಇಂಡೀಸ್ ವಿರುದ್ಧ ಭಾರತಕ್ಕೆ ಪ್ರಯಾಸದ ಗೆಲುವು

ಶುಕ್ರವಾರ, 6 ಮಾರ್ಚ್ 2015 (19:39 IST)
ಪರ್ತ್: ವೆಸ್ಟ್ ಇಂಡೀಸ್ ಮತ್ತು ಭಾರತ ನಡುವೆ ಪರ್ತ್‌ನ ಡಬ್ಲ್ಯುಸಿಎ ಮೈದಾನದಲ್ಲಿ ನಡೆದ ಪೂಲ್ ಬಿ ವಿಭಾಗದ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಸಾಧಾರಣ ಮೊತ್ತವಾದ 182 ರನ್ ಬೆನ್ನತ್ತಿದ ಭಾರತ 4 ವಿಕೆಟ್‌ಗಳಿಂದ ಪ್ರಯಾಸದ ಗೆಲುವನ್ನು ಗಳಿಸಿದೆ. ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅಶ್ವಿನ್ ಅವರ ಎಚ್ಚರಿಕೆಯ ಆಟದಿಂದಾಗಿ ಟೀಂ ಇಂಡಿಯಾ 39. 1 ಓವರುಗಳಲ್ಲಿ 185 ರನ್ ಗಳಿಸಿ ಗೆಲುವಿನ ದಡವನ್ನು ಪ್ರಯಾಸದಿಂದ ಮುಟ್ಟಿತು.

ಟೀಂ ಇಂಡಿಯಾ ಪರ ಆರಂಭಿಕ ಆಟಗಾರಾದ ರೋಹಿತ್ ಶರ್ಮಾ ಟೇಲರ್ ಬೌಲಿಂಗ್‌ನಲ್ಲಿ ರಾಮ್ಡಿನ್‌ಗೆ ಕ್ಯಾಚಿತ್ತು ಔಟಾದರು ಮತ್ತು ಶಿಖರ್ ದವನ್ ಟೇಲರ್ ಬೌಲಿಂಗ್‌ನಲ್ಲಿ ಸ್ಯಾಮಿಗೆ ಕ್ಯಾಚಿತ್ತು ಔಟಾದರು. ವೆಸ್ಟ್ ಇಂಡೀಸ್ ಬೌಲರುಗಳ ವೇಗದ ಮತ್ತು ಬೌನ್ಸ್ ದಾಳಿಗೆ ತತ್ತರಿಸಿದ ಟೀಂ ಇಂಡಿಯಾ ಆಟಗಾರರು ಒಬ್ಬೊಬ್ಬರಾಗಿ ಪೆವಿಲಿಯನ್ ಹಾದಿ ಹಿಡಿದಾಗ ಟೀಂ ಇಂಡಿಯಾ ಪಾಳೆಯದಲ್ಲಿ ಆತಂಕದ ಕಾರ್ಮೋಡ ಕವಿದಿತ್ತು.

 ರೋಹಿತ್ ಶರ್ಮಾ ಕೇವಲ 7 ರನ್ ಗಳಿಸಿದ್ದರೆ, ಶಿಖರ್ ಧವನ್ 9 ರನ್ ಗಳಿಸಿದ್ದರು. ನಂತರ ಆಡಲಿಳಿದ ವಿರಾಟ್ ಕೊಹ್ಲಿ 36 ಎಸೆತಗಳಲ್ಲಿ 33 ರನ್ ಗಳಿಸಿ ರಸೆಲ್ ಬೌಲಿಂಗ್‌ನಲ್ಲಿ ಚೆಂಡನ್ನು ಮೇಲೆತ್ತಿದಾಗ ಸ್ಯಾಮ್ಯುಯೆಲ್ಸ್ ಸುಲಭ ಕ್ಯಾಚ್ ಹಿಡಿದು ಔಟಾದರು. ರಹಾನೆ ಕೂಡ ರೋಚ್ ಎಸೆತಕ್ಕೆ ರಾಮ್ಡಿನ್‌‌ಗೆ ಕ್ಯಾಚಿತ್ತು ಔಟಾದರು. ಆಗ ಭಾರತದ ಸ್ಕೋರು 4 ವಿಕೆಟ್ ಕಳೆದುಕೊಂಡು 78 ರನ್‌ಗಳಾಗಿದ್ದು ಸಂಕಷ್ಟದ ಸ್ಥಿತಿಯಲ್ಲಿತ್ತು.

ನಂತರ ಬಂದ ಸುರೇಶ್ ರೈನಾ ಧೋನಿ ಜೊತೆಯಾಟದಲ್ಲಿ 29 ರನ್ ಕಲೆಹಾಕಿದರು. ಸುರೇಶ್ ರೈನಾ 23 ರನ್‌ಗಳಿಗೆ ಔಟಾದ ಬಳಿಕ ಆಡಲಿಳಿದ ರವೀಂದ್ರ ಜಡೇಜಾ 13 ರನ್‌ಗೆ ಔಟಾದರು. ಆಗ ಭಾರತದ ಸ್ಕೋರು 6 ವಿಕೆಟ್ ಕಳೆದುಕೊಂಡು 134 ರನ್‌ಗಳಾಗಿದ್ದು, ಗೆಲ್ಲುವುದಕ್ಕೆ 47 ರನ್ ಅವಶ್ಯಕತೆಯಿತ್ತು. ಆದರೆ ಧೋನಿ ಮತ್ತು ಅಶ್ವಿನ್ ಅವರ ಆತ್ಮವಿಶ್ವಾಸ, ಎಚ್ಚರಿಕೆಯ ಆಟದಿಂದ ಅಂತಿಮವಾಗಿ 182 ರನ್ ಗಡಿಯನ್ನು ಯಶಸ್ವಿಯಾಗಿ ದಾಟಿ ಟೀಂ ಇಂಡಿಯಾ ಗೆಲುವು ಗಳಿಸಿದೆ.

 ಧೋನಿ ಅವರು 56 ಎಸೆತಗಳಿಂದ 45 ರನ್ ಗಳಿಸಿದ್ದು, ಅವರ ಸ್ಕೋರಿನಲ್ಲಿ 3 ಬೌಂಡರಿ ಮತ್ತು ಒಂದು ಸಿಕ್ಸರ್ ಇದ್ದಿತ್ತು. ವೆಸ್ಟ್ ಇಂಡೀಸ್ ಪರ ಜೆರೋಮ್ ಟೇಲರ್ ಮತ್ತು ರಸೆಲ್ ತಲಾ 2 ವಿಕೆಟ್ ಗಳಿಸಿದರೆ, ಕೇಮರ್ ರೋಚ್ ಮತ್ತು ಸ್ಮಿತ್ ತಲಾ 1 ವಿಕೆಟ್ ಗಳಿಸಿದರು.
 
ಮೊದಲಿಗೆ ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಮಹಮ್ಮದ್ ಶಮಿ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 182 ರನ್‌ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತ್ತು. ಆರಂಭದಲ್ಲೇ ಡೇನ್ ಸ್ಮಿತ್ ಅವರು ಶಮಿ ಎಸೆತದಲ್ಲಿ ಧೋನಿಗೆ ಕ್ಯಾಚಿತ್ತು ಔಟಾದರು. ಅವರು 27 ಎಸೆತಗಳಲ್ಲಿ 21 ರನ್ ಬಾರಿಸಿದರು. ಸ್ಯಾಮ್ಯುಯೆಲ್ಸ್ ಮೋಹಿತ್ ಶರ್ಮಾ ಬೌಲಿಂಗ್‌ನಲ್ಲಿ ಕೊಹ್ಲಿಗೆ ರನ್ ಔಟ್ ಆದರು.

 ನಂತರ ಕ್ರಿಸ್ ಗೇಲ್ ಬಿರುಸಿನಿಂದ ರನ್ ಸ್ಕೋರ್ ಮಾಡಲು ಹೋಗಿ ಶಮಿ ಎಸೆತದಲ್ಲೇ ಮೋಹಿತ್ ಶರ್ಮಾಗೆ ಕ್ಯಾಚಿತ್ತು ಔಟಾದರು. ವೆಸ್ಟ್ ಇಂಡೀಸ್ 8.6 ಓವರುಗಳಲ್ಲಿ 35 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿತ್ತು. ಮುಂದಿನ ಓವರಿನಲ್ಲೇ ರಾಮ್ಡಿನ್ ಉಮೇಶ್ ಯಾದವ್‌ಗೆ ಬೌಲ್ಡ್ ಆದರು.ವೆಸ್ಟ್ ಇಂಡೀಸ್ ಸ್ಕೋರ್ 67 ರನ್‌ಗಳಾಗಿದ್ದಾಗ ಸಿಮ್ಮನ್ಸ್ ಮೋಹಿತ್ ಶರ್ಮಾ ಎಸೆತದಲ್ಲಿ ಉಮೇಶ್‌ಗೆ ಕ್ಯಾಚಿತ್ತು ಔಟಾದರು. ಆಗ ವೆಸ್ಟ್ ಇಂಡೀಸ್ ಸ್ಕೋರ್ 5 ವಿಕೆಟ್ ಕಳೆದುಕೊಂಡು 67 ರನ್‌ಗಳಾಗಿತ್ತು.

ಡ್ಯಾರೆನ್ ಸ್ಯಾಮಿ ಶಮಿ ಬೌಲಿಂಗ್‌ನಲ್ಲಿ ಧೋನಿಗೆ ಕ್ಯಾಚಿತ್ತು ಔಟಾದಾಗ ಅವರ ಸ್ಕೋರ್ 55 ಎಸೆತಗಳಲ್ಲಿ 26 ರನ್‌ಗಳಾಗಿತ್ತು. ಜ್ಯಾಸನ್ ಹೋಲ್ಡರ್ ಅವರೊಬ್ಬರೇ ವೆಸ್ಟ್ ಇಂಡೀಸ್ ಪರ ಉತ್ತಮ ಸ್ಕೋರ್ ಕಲೆ ಹಾಕಿ 64ಎಸೆತಗಳಲ್ಲಿ 57 ರನ್ ಸಿಡಿಸಿದರು. ವೆಸ್ಟ್ ಇಂಡೀಸ್  40 ಓವರುಗಳಲ್ಲಿ 8ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು. ಹೋಲ್ಡರ್ ಔಟಾದ ಬಳಿಕ ಟೇಲರ್ ಮತ್ತು ರೋಚ್ ಕೂಡ ಬೇಗನೇ ಔಟಾಗಿ ವೆಸ್ಟ್ ಇಂಡೀಸ್ 44.2 ಓವರುಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 182 ರನ್ ಗಳಿಸಿದೆ.

 ಟೀಂ ಇಂಡಿಯಾ ಪರ ಮಹಮ್ಮದ್ ಶಮಿ ಅವರು ಮಾರಕ ಬೌಲಿಂಗ್ ದಾಳಿ ಮಾಡಿದ್ದು 8 ಓವರುಗಳಲ್ಲಿ 35 ರನ್ ನೀಡಿ 3 ವಿಕೆಟ್ ಕಬಳಿಸಿದ್ದಾರೆ.  ಉಮೇಶ್ ಯಾದವ್ ಮತ್ತು ರವೀಂದ್ರ ಜಡೇಜಾ ತಲಾ ಎರಡು ವಿಕೆಟ್ ಗಳಿಸಿದರೆ ಮೋಹಿತ್ ಶರ್ಮಾ ಮತ್ತು ಅಶ್ವಿನ್ ತಲಾ ಒಂದು ವಿಕೆಟ್ ಕಬಳಿಸಿದರು. 
 

ವೆಬ್ದುನಿಯಾವನ್ನು ಓದಿ