ಭಾರತ -ಪಾಕ್ ಕ್ರಿಕೆಟ್ ಸರಣಿಗೆ ಸರ್ಕಾರದ ಗ್ರೀನ್ ಸಿಗ್ನಲ್

ಬುಧವಾರ, 13 ಮೇ 2015 (18:33 IST)
ಈ ವರ್ಷದ ಡಿಸೆಂಬರ್‌ನಲ್ಲಿ ಯುಎಇನಲ್ಲಿ ನಡೆಸಲು ಉದ್ದೇಶಿಸಿರುವ ಭಾರತ ಪಾಕಿಸ್ತಾನ ಸರಣಿಗೆ ಭಾರತ ಸರ್ಕಾರ ಹಸಿರು ನಿಶಾನೆ ನೀಡುವ ಮೂಲಕ ಕ್ರಿಕೆಟ್ ಅಭಿಮಾನಿಗಳಿಗೆ ಸಂತಸ ತಂದಿದೆ. 
 
ಪಿಸಿಬಿ ಅಧ್ಯಕ್ಷ ಶಹರ್ ಯಾರ್ ಖಾನ್ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ ಬಳಿಕ ಈ ಅನುಮೋದನೆ ಸಿಕ್ಕಿದೆ.  ಕ್ರೀಡೆಯನ್ನು ರಾಜಕೀಯದ ಜೊತೆ ಬೆರೆಸಬಾರದು ಎಂದು ಸರ್ಕಾರ ದೃಷ್ಟಿಕೋನ ಹೊಂದಿದೆ. ಆದರೆ ಭಯೋತ್ಪಾದನೆ ವಿಷಯದ ಬಗ್ಗೆ ಯಾವುದೇ ರಾಜಿ ಇಲ್ಲ ಎಂದು ಮನದಟ್ಟು ಮಾಡಿದ್ದಾಗಿ ಮೂಲಗಳು ಹೇಳಿವೆ.
 
ಕಳೆದ ಕೆಲವು ದಿನಗಳಿಂದ ಶಹರ್‌ಯಾರ್ ಬಿಸಿಸಿಐ ಮುಖ್ಯಸ್ಥ ಜಗಮೋಹನ್ ದಾಲ್ಮಿಯಾ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕುರ್ ಜೊತೆ ಮಾತುಕತೆ ನಡೆಸಿದರು.  ಇದಕ್ಕೆ ಮುಂಚೆ ತೆಗೆದುಕೊಂಡ ಮಹತ್ವದ ಕ್ರಮವೊಂದರಲ್ಲಿ, ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಆಡಳಿತ ಮಂಡಳಿಗಳು 8 ವರ್ಷಗಳಲ್ಲಿ ಐದು ದ್ವಿಪಕ್ಷೀಯ ಸರಣಿಗಳನ್ನು ಆಡಲು ನಿರ್ಧರಿಸಿವೆ. ಈ ವರ್ಷದ ಡಿಸೆಂಬರ್‌‌ನಲ್ಲಿ ಮೊದಲ ಸರಣಿಯನ್ನು ಆಡಲು ನಿರ್ಧರಿಸಿವೆ. 
 
ಸರಣಿಯು ಡಿಸೆಂಬರ್‌ನಲ್ಲಿ ವೇಳಾಪಟ್ಟಿಯಂತೆ ನಡೆಯುತ್ತದೆ ಮತ್ತು ಇದು ಮೂರು ಟೆಸ್ಟ್ ಪಂದ್ಯಗಳು, ಐದು ಏಕದಿನ ಪಂದ್ಯಗಳು ಮತ್ತು ಎರಡು ಟಿ20ಗಳನ್ನು ಒಳಗೊಂಡಿವೆ. ಇದಕ್ಕೆ ಸಿದ್ಧತೆ ಪೂರ್ಣೋಪಾದಿಯಲ್ಲಿ ನಡೆಯುತ್ತಿದೆ ಎಂದು ಶಹರ್‌ಯಾರ್ ಹೇಳಿದರು.  ತಾವು ವಿಶೇಷವಾಗಿ ಬಿಸಿಸಿಐ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದಾಲ್ಮಿಯಾ ಅವರನ್ನು ಅಭಿನಂದಿಸಲು ಕೋಲ್ಕತಾಗೆ ಬಂದಿದ್ದೇನೆ ಎಂದು ಶಹರ್‌ಯಾರ್ ಹೇಳಿದ್ದಾರೆ. 
 

ವೆಬ್ದುನಿಯಾವನ್ನು ಓದಿ