ಹೈದರಾಬಾದ್: ಭಾರತ ಮತ್ತು ಇಂಗ್ಲೆಂಡ್ ನಡುವೆ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತದ ಸ್ಪಿನ್ ಜೋಡಿ ರವಿಚಂದ್ರನ್ ಅಶ್ವಿನ್-ರವೀಂದ್ರ ಜಡೇಜಾ ದಾಖಲೆಯೊಂದನ್ನು ಮಾಡಿದ್ದಾರೆ.
ಈ ಇಬ್ಬರೂ ಟೆಸ್ಟ್ ಕ್ರಿಕೆಟ್ ನಲ್ಲಿ ಜೊತೆಯಾಗಿ ಆಡುತ್ತಿದ್ದರೆ ಎದುರಾಳಿಗಳ ಕತೆ ಮುಗಿದಂತೇ ಎಂಬ ಮಾತಿದೆ. ಅಷ್ಟರಮಟ್ಟಿಗೆ ಇಬ್ಬರೂ ಜೋಡಿಯಾಗಿ ಟೀಂ ಇಂಡಿಯಾಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಸಕ್ಸಸ್ ತಂದುಕೊಡುತ್ತಿದ್ದಾರೆ. ಟೆಸ್ಟ್ ಪಂದ್ಯಗಳಲ್ಲಿ ಕೇವಲ ಬೌಲಿಂಗ್ ಮಾತ್ರವಲ್ಲ, ಎಷ್ಟೋ ಬಾರಿ ಬ್ಯಾಟಿಂಗ್ ನಲ್ಲೂ ಆಪತ್ ಬಾಂಧವರಾದ ಜೋಡಿಯಿದು.
ಇದೀಗ ಇಬ್ಬರೂ ಬೌಲಿಂಗ್ ನಲ್ಲಿ ಹೊಸ ದಾಖಲೆಯನ್ನೇ ಮಾಡಿದ್ದಾರೆ. ಅಶ್ವಿನ್-ಜಡೇಜಾ ಜೋಡಿ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತದ ಪರ ಜೋಡಿಯಾಗಿ 500 ಪ್ಲಸ್ ವಿಕೆಟ್ ಪಡೆದ ದಾಖಲೆ ಮಾಡಿದೆ. ಟೀಂ ಇಂಡಿಯಾ ಪರ ಅತ್ಯಧಿಕ ವಿಕೆಟ್ ಪಡೆದ ಜೋಡಿ ಎಂಬ ದಾಖಲೆ ಇದುವರೆಗೆ ಅನಿಲ್ ಕುಂಬ್ಳೆ ಮತ್ತು ಹರ್ಭಜನ್ ಸಿಂಗ್ ಹೆಸರಿನಲ್ಲಿತ್ತು. ಇಬ್ಬರೂ ಜೊತೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 501 ವಿಕೆಟ್ ಕಬಳಿಸಿದ್ದರು.
ಆದರೆ ಆ ದಾಖಲೆ ಇದೀಗ ಅಶ್ವಿನ್-ಜಡೇಜಾ ಜೋಡಿಯ ಪಾಲಾಗಿದೆ. 50 ಟೆಸ್ಟ್ ಪಂದ್ಯಗಳಿಂದ ಈ ಜೋಡಿ ಈ ದಾಖಲೆ ಮಾಡಿದೆ. ಈ ಪಂದ್ಯದಲ್ಲಿ ಇಂದು ಈಗಾಗಲೇ ಅಶ್ವಿನ್ 2 ವಿಕೆಟ್ ಕಬಳಿಸಿದರೆ ಜಡೇಜಾ 1 ವಿಕೆಟ್ ತಮ್ಮದಾಗಿಸಿಕೊಂಡಿದ್ದಾರೆ. ಜಾಗತಿಕವಾಗಿ ಈ ದಾಖಲೆ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ಹೆಸರಿನಲ್ಲಿದೆ. ಈ ವೇಗದ ಜೋಡಿ ಜೊತೆಯಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ 138 ಟೆಸ್ಟ್ ಪಂದ್ಯಗಳಿಂದ 1039 ವಿಕೆಟ್ ಕಬಳಿಸಿದೆ.
ಇದರ ಜೊತೆಗೆ ಅಶ್ವಿನ್ ಟೆಸ್ಟ್ ಚಾಂಪಿಯನ್ ಶಿಪ್ ನಲ್ಲಿ 150 ಪ್ಲಸ್ ವಿಕೆಟ್ ಪಡೆದ ದಾಖಲೆಯನ್ನೂ ಮಾಡಿದರು. ಈ ದಾಖಲೆ ಮಾಡಿದ ಮೊದಲ ಭಾರತೀಯ ಆಟಗಾರ ಎನಿಸಿಕೊಂಡರು.