ಬಿಸಿಸಿಐ ಸಂಕಷ್ಟದ ನಡುವೆಯೂ ಮತ್ತಷ್ಟು ಕ್ರಿಕೆಟ್ ಮೈದಾನಗಳ ನಿರ್ಮಾಣಕ್ಕೆ ಸಜ್ಜು

ಶುಕ್ರವಾರ, 13 ಜನವರಿ 2017 (15:40 IST)
ಮುಂಬೈ: ಒಂದು ಕಡೆ ಸುಪ್ರೀಂ ಕೋರ್ಟ್ ಆದೇಶದ ಬಿಸಿ, ಇನ್ನೊಂದು ಕಡೆ ಲೋಧಾ ಸಮಿತಿಯ ವರದಿಯನ್ನು ಪಾಲಿಸಲೇಬೇಕಾದ ಸಂಕಟ, ಮತ್ತೊಂದೆಡೆ ಆಡಳಿತಾಧಿಕಾರಿಗಳನ್ನು ನೇಮಿಸುವ ತಲೆಬಿಸಿ. ಇದೆಲ್ಲದರ ಮಧ್ಯೆ ಬಿಸಿಸಿಐ ದಿಕ್ಕೆಟ್ಟು ಕೂತಿರಬೇಕಾದರೆ ದೇಶದಲ್ಲಿ ಮತ್ತಷ್ಟು ಕ್ರಿಕೆಟ್ ಮೈದಾನಗಳ ನಿರ್ಮಾಣಕ್ಕೆ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಸಜ್ಜಾಗಿವೆ.

ಗುಜರಾತ್ ಕ್ರಿಕೆಟ್ ಸಂಸ್ಥೆ ಈಗಾಗಲೇ ಪ್ರಧಾನಿ ನರೇಂದ್ರ ಮೋದಿ ಕನಸಿನ ಕೂಸಾದ ವಿಶ್ವದಲ್ಲೇ ಅತೀ ದೊಡ್ಡ ಮೈದಾನ ಸಜ್ಜುಗೊಳಿಸುತ್ತಿದೆ. ಇದು ಇನ್ನೊಂದು ವರ್ಷದಲ್ಲಿ ಪೂರ್ತಿಯಾಗುವ ನಿರೀಕ್ಷೆಯಿದೆ. ಈ ಮೈದಾನದಲ್ಲಿ 100,024 ಮಂದಿ ಕೂರುವ ಆಸನ ವ್ಯವಸ್ಥೆಯಿದೆ.

ಇದೀಗ ಮಧ್ಯಪ್ರದೇಶ ಕ್ರಿಕೆಟ್ ಸಂಸ್ಥೆ ರಾಜ್ಯದ ಎರಡನೇ ಕ್ರಿಕೆಟ್ ಮೈದಾನ ನಿರ್ಮಿಸಲು ತಯಾರಿ ನಡೆಸಿದೆ. ಈಗಾಗಲೇ ಇಂಧೋರ್ ನಲ್ಲಿ ಒಂದು ಕ್ರಿಕೆಟ್ ಮೈದಾನವಿದೆ. 120 ಕೋಟಿ ರೂ ವೆಚ್ಚದಲ್ಲಿ 55 ಸಾವಿರ ಮಂದಿಗೆ ಆಸನ ವ್ಯವಸ್ಥೆಯಿರುವ ಮೈದಾನವೊಂದು ನಿರ್ಮಾಣವಾಗಲಿದೆ.

ಇನ್ನು ಪಂಜಾಬ್ ಕ್ರಿಕೆಟ್ ಅಸೋಸಿಯೇಷನ್ ಈಗಾಗಲೇ ತನ್ನ ಪ್ರಮುಖ ಕ್ರಿಕೆಟ್ ಮೈದಾನವಾದ ಮೊಹಾಲಿಯಿಂದ ಹೊಸ ಮೈದಾನಕ್ಕೆ ವರ್ಗವಾಗಲು ತಯಾರಿ ನಡೆಸಿದೆ. ಇದಕ್ಕಾಗಿ ಚಂಡೀಘಡದಲ್ಲಿ ಒಂದು ಮೈದಾನ ನಿರ್ಮಾಣ ಮಾಡಲಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ