ಮುಂಬೈ: ಈಗಾಗಲೇ ಟಿ20 ಮತ್ತು ಟೆಸ್ಟ್ ಮಾದರಿ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿರುವ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ 2027 ರ ಏಕದಿನ ವಿಶ್ವಕಪ್ ಗೂ ಮುನ್ನವೇ ಏಕದಿನಕ್ಕೂ ನಿವೃತ್ತಿ ಹೇಳಿದರೂ ಅಚ್ಚರಿಯಿಲ್ಲ ಎನ್ನುತ್ತಿವೆ ವರದಿಗಳು.
ಕೊಹ್ಲಿ ಮತ್ತು ರೋಹಿತ್ ಇಬ್ಬರೂ ಈಗ ಗುರಿಯಿಟ್ಟಿರುವುದು ಏಕದಿನ ವಿಶ್ವಕಪ್ ಮೇಲೆ. ಕಳೆದ ಏಕದಿನ ವಿಶ್ವಕಪ್ ಫೈನಲ್ ವರೆಗೂ ಬಂದು ಕಪ್ ಗೆಲ್ಲಲಾಗದ ಹತಾಶೆ ಇಬ್ಬರೂ ಆಟಗಾರರಲ್ಲಿದೆ. ಅದೇ ಕಾರಣಕ್ಕೆ ಮುಂದಿನ ಏಕದಿನ ವಿಶ್ವಕಪ್ ಗೆದ್ದುಕೊಡುವ ಛಲದಲ್ಲಿ ಇಬ್ಬರೂ ಏಕದಿನ ಮಾದರಿಗೆ ಗುಡ್ ಬೈ ಹೇಳದೇ ಉಳಿದುಕೊಂಡಿದ್ದಾರೆ.
ಆದರೆ ಟೀಂ ಇಂಡಿಯಾ ಏಕದಿನ ಸರಣಿಗಳನ್ನು ಆಡುವುದೇ ಕಡಿಮೆ. ಹೀಗಿರುವಾಗ ಈ ಆಟಗಾರರು ಇನ್ನು ಎರಡು ವರ್ಷದವರೆಗೆ ಫಾರ್ಮ್ ಉಳಿಸಿಕೊಳ್ಳಲು ಸಾಧ್ಯವೇ ಎಂಬುದು ಪ್ರಶ್ನೆ. ಈ ನಡುವೆ ಯುವ ಆಟಗಾರರು ಅತ್ಯುತ್ತಮ ಫಾರ್ಮ್ ಪ್ರದರ್ಶಿಸಿದರೆ ಹಿರಿಯ ಆಟಗಾರರನ್ನು ಕಡೆಗಣಿಸಿ ಬಿಸಿಸಿಐ ಯುವ ಆಟಗಾರರಿಗೇ ಮಣೆ ಹಾಕುವ ಸಾಧ್ಯತೆ ಹೆಚ್ಚು.
ಈಗಾಗಲೇ ಯುವಕರಿಗೆ ದಾರಿ ಮಾಡಿಕೊಡುವ ನಿಟ್ಟಿನಿಂದ ರೋಹಿತ್, ಕೊಹ್ಲಿಗೆ ಬಿಸಿಸಿಐಯೇ ಟೆಸ್ಟ್ ಮಾದರಿಯಿಂದ ನಿವೃತ್ತಿ ಹೇಳಲು ಸೂಚಿಸಿತ್ತು ಎಂಬ ವರದಿಯಿದೆ. ಹೀಗಾಗಿ ಏಕದಿನ ಫಾರ್ಮ್ಯಾಟ್ ನಿಂದಲೂ ಈ ಇಬ್ಬರೂ ಆಟಗಾರರನ್ನು ವಿಶ್ವಕಪ್ ಗೆ ಮುನ್ನ ನಿವೃತ್ತಿಯಾಗಲು ಸೂಚಿಸಿದರೂ ಅಚ್ಚರಿಯಿಲ್ಲ.