ಕ್ವಾಲಿಫೈಯರ್ 2: ಸನ್‌ರೈಸರ್ಸ್ ಸದೃಢ ಪೇಸ್ ದಾಳಿ, ಲಯನ್ಸ್‌ಗೆ ಅಗ್ನಿಪರೀಕ್ಷೆ

ಗುರುವಾರ, 26 ಮೇ 2016 (16:33 IST)
ನವದೆಹಲಿ: ಚೊಚ್ಚಲ ಸೀಸನ್‌ನಲ್ಲೇ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಗುಜರಾತ್ ಲಯನ್ಸ್ ತಂಡವು ನಾಳೆ ನಡೆಯುವ ಐಪಿಎಲ್ ಕ್ವಾಲಿಫೈಯರ್ 2 ಪಂದ್ಯದಲ್ಲಿ ಸನ್ ರೈಸರ್ಸ್ ತಂಡದ  ವೇಗಿಗಳ ಮಾರಕ ಬೌಲಿಂಗ್ ಎದುರಿಸಬೇಕಿದೆ. ಚೊಚ್ಚಲ ಐಪಿಎಲ್ ಪ್ರವೇಶದಲ್ಲೇ ಸುರೇಶ್ ರೈನಾ ಸಾರಥ್ಯದ ಗುಜರಾತ್ ಲಯನ್ಸ್ ಮನೋಜ್ಞ ಪ್ರದರ್ಶನ ನೀಡಿದ್ದು, ಪ್ಲೇ ಆಫ್‌ನಲ್ಲಿ ಪಟ್ಟಿಯ ಟಾಪ್ ಸ್ಥಾನದಲ್ಲಿದ್ದರು.
 
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಬೌಲಿಂಗ್‌ನ ಮೊದಲಾರ್ಧದಲ್ಲಿ ಗುಜರಾತ್ ಲಯನ್ಸ್ ಮೇಲುಗೈ ಸಾಧಿಸಿತ್ತು. ಆದರೆ ಡಿ ವಿಲಿಯರ್ಸ್ ರೋಚಕ ಬ್ಯಾಟಿಂಗ್ ಮೂಲಕ ಪಂದ್ಯ ತಿರುವು ತೆಗೆದುಕೊಂಡಿತು.
 
ಆದರೆ ಲಯನ್ಸ್ ತಂಡಕ್ಕೆ ಈಗ ಗೆಲುವು ಅಷ್ಟು ಸುಲಭವಾಗಿ ದಕ್ಕುವುದಿಲ್ಲ. ಲೀಗ್ ಹಂತದಲ್ಲಿ ಎರಡು ಬಾರಿಯೂ ಅದು ಸನ್‌ರೈಸರ್ಸ್ ತಂಡಕ್ಕೆ ಸೋತಿದೆ. ಆಶಿಶ್ ನೆಹ್ರಾ ಗೈರಿನಲ್ಲಿ ಸನ್ ರೈಸರ್ಸ್ ಬೌಲಿಂಗ್ ಬಲ ಸ್ವಲ್ಪಮಟ್ಟಿಗೆ ಕುಂದಿದ್ದರೂ, ಭುವನೇಶ್ವರ ಕುಮಾರ್ ಮತ್ತು ಬಾಂಗ್ಲಾ ವೇಗಿ ಮುಸ್ತಫಿಜುರ್ ರೆಹ್ಮಾನ್ ಸನ್ ರೈಸರ್ಸ್ ತಂಡಕ್ಕೆ ಬಲ ತುಂಬಿದ್ದಾರೆ. 
 ಎಲಿಮಿನೇಟರ್ ಹಂತದಲ್ಲೂ ನಾಯಕ ಡೇವಿಡ್ ವಾರ್ನರ್ ಭುವನೇಶ್ವರ್ ಮತ್ತು ಮುಸ್ತಫಿಜುರ್ ಅವರನ್ನು ಬಳಸಿಕೊಂಡು ನೈಟ್ ರೈಡರ್ಸ್ ಮೇಲೆ ಒತ್ತಡ ಹೇರಿದ್ದರಿಂದ ನೈಟ್ ರೈಡರ್ಸ್ ಕುಸಿದಿತ್ತು. 
 
ಫಿರೋಜ್ ಷಾ ಕೋಟ್ಲಾ ಮೈದಾನದ ವಿಕೆಟ್ ನಿಧಾನಗತಿಗೆ ತಿರುಗುತ್ತಿದ್ದು, ಲಯನ್ಸ್ ವೇಗಿ ಧವಲ್ ಕುಲಕರ್ಣಿ ರಾಯಲ್ ವಿರುದ್ಧ ಬೌಲಿಂಗ್ ಮಾಡಿದ ರೀತಿಯನ್ನು ಗಮನಿಸಿದರೆ ಬ್ಯಾಟ್ಸ್‌ಮನ್‌ಗಳಿಗೆ ಕಠಿಣ ಪರೀಕ್ಷೆ ಎದುರಾದಂತೆ ಕಾಣುತ್ತಿದೆ.
ಆದರೂ ಸನ್ ರೈಸರ್ಸ್ ವೇಗಿಗಳನ್ನು ಬ್ರೆಂಡನ್ ಮೆಕಲಮ್ ಸಮರ್ಥವಾಗಿ ಎದುರಿಸುತ್ತಾರೆಂಬ ಆಶಯವನ್ನು ಲಯನ್ಸ್ ಹೊಂದಿದೆ.  ಮೆಕಲಮ್ ಜತೆಗೆ ಡ್ವೇನ್ ಸ್ಮಿತ್, ಆರಾನ್ ಫಿಂಚ್, ರೈನಾ ಅವರ ಬ್ಯಾಟಿಂಗ್ ಶಕ್ತಿಯನ್ನು ಲಯನ್ಸ್ ಹೊಂದಿದೆ.
 
ಸನ್‌ರೈಸರ್ಸ್ ಪರ ಯುವರಾಜ್ ತಮ್ಮ ಹಿಂದಿನ ಲಯ ಕಂಡುಕೊಂಡಿದ್ದು ಶುಭಸುದ್ದಿಯಾಗಿದೆ.ಆದರೂ ಇದು ಖಂಡಿತವಾಗಿ ಸನ್ ರೈಸರ್ಸ್ ಪೇಸ್ ಬೌಲರುಗಳು ಮತ್ತು ಲಯನ್ಸ್ ಬ್ಯಾಟ್ಸ್‌ಮನ್‌ಗಳ ನಡುವೆ ಕದನವಾಗಿದೆ. ಈ ಬಾರಿ ಯಾವ ತಂಡ ಫೈನಲ್‌ ಪ್ರವೇಶಿಸಿದರೂ ಈ ಸೀಸನ್‌ನಲ್ಲಿ ಹೊಸ ತಂಡವು ಚಾಂಪಿಯನ್ ಕಿರೀಟ ಧರಿಸಲಿದೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

ವೆಬ್ದುನಿಯಾವನ್ನು ಓದಿ