ಕೋಲ್ಕೊತ್ತಾ: ಐಪಿಎಲ್ 2024 ರಲ್ಲಿ ಕೋಲ್ಕೊತ್ತಾ ನೈಟ್ ರೈಡರ್ಸ್ ಗೆ ಇಂದು ನತದೃಷ್ಟ ಪಂಜಾಬ್ ಕಿಂಗ್ಸ್ ಎದುರಾಳಿಯಾಗಿದೆ. ಈ ಪಂದ್ಯ ಕೋಲ್ಕೊತ್ತಾದ ಈಡನ್ ಗಾರ್ಡನ್ ನಲ್ಲಿ ನಡೆಯಲಿದೆ.
ಶ್ರೇಯಸ್ ಅಯ್ಯರ್ ನೇತೃತ್ವದ ಕೆಕೆಆರ್ ತಂಡ ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ. ಇದುವರೆಗೆ ಆಡಿದ 7 ಪಂದ್ಯಗಳಿಂದ 5 ಗೆಲುವು ಸಂಪಾದಿಸಿ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಳೆದ ಪಂದ್ಯದಲ್ಲಿ ಆರ್ ಸಿಬಿ ವಿರುದ್ಧ ರೋಚಕವಾಗಿ 1 ರನ್ ಗಳಿಂದ ಗೆದ್ದುಕೊಂಡಿದ್ದ ಕೆಕೆಆರ್ ತನ್ನ ಗೆಲುವಿನ ನಾಗಲೋಟ ಮುಂದುವರಿಸುವ ವಿಶ್ವಾಸದಲ್ಲಿದೆ.
ಶ್ರೇಯಸ್ ಅಯ್ಯರ್, ರಿಂಕು ಸಿಂಗ್, ಆಂಡ್ರ್ಯೂ ರಸೆಲ್ ನಂತಹ ಟಿ20 ಸ್ಪೆಷಲಿಸ್ಟ್ ಗಳ ತಂಡವೇ ಕೆಕೆಆರ್ ಬಳಿಯಿದೆ. ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್, ಹರ್ಷಿತ್ ರಾಣ, ಶಕೀಬ್ ಅಲ್ ಹಸನ್ ರಂತಹ ಅನುಭವಿ-ಅನನುಭವಿಗಳ ಪಡೆಯಿದೆ. ಹೀಗಾಗಿ ಕೆಕೆಆರ್ ಮೇಲ್ನೋಟಕ್ಕೆ ಫೇವರಿಟ್ ತಂಡವಾಗಿದೆ.
ಇನ್ನೊಂದೆಡೆ ಪಂಜಾಬ್ ಕಿಂಗ್ಸ್ ಗೆ ಈ ಟೂರ್ನಿ ಯಾಕೋ ಅನ್ ಲಕ್ಕಿ ಎನ್ನಬಹುದು. ಬಹುತೇಕ ಪಂದ್ಯಗಳಲ್ಲಿ ಪಂಜಾಬ್ ಗೆಲುವಿನ ಬಾಗಿಲಿನವರೆಗೆ ಬಂದು ಕೊನೆಯ ಹಂತದಲ್ಲಿ ಎಡವಿಬಿದ್ದಿದೆ. ಆಡಿದ 8 ಪಂದ್ಯಗಳಿಂದ ಪಂಜಾಬ್ ಗಳಿಸಿದ್ದು ಕೇವಲ 2 ಗೆಲುವು ಮಾತ್ರ. ಕಳೆದ ನಾಲ್ಕು ಪಂದ್ಯಗಳಲ್ಲಿ ಸತತವಾಗಿ ಸೋತು ಶಿಖರ್ ಧವನ್ ಪಡೆ ಬಸವಳಿದಿದೆ. ಈಗ ಗೆಲುವು ಪ್ಲೇ ಆಫ್ ಮೇಲೆ ಹೆಚ್ಚಿನ ಪರಿಣಾಮ ಬೀರದೇ ಇದ್ದರೂ ಮಾನ ಕಾಪಾಡಿಕೊಳ್ಳಬಹುದಾಗಿದೆ. ಈ ಪಂದ್ಯ ಸಂಜೆ 7.30 ಕ್ಕೆ ಆರಂಭವಾಗುವುದು.