ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಧೋನಿ ಮತ್ತೊಂದು ಐಪಿಎಲ್ ಸೀಸನ್ ನಲ್ಲಿ ಆಡಲು ರೆಡಿಯಾಗುತ್ತಿದ್ದಾರೆ. ಆದರೆ ಅವರಿಗೆ ಇದುವೇ ಕೊನೆಯ ಐಪಿಎಲ್ ಆಗಿರಬಹುದು ಎಂದು ಸ್ನೇಹಿತ, ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ ಹೇಳಿದ್ದಾರೆ.
ಉತ್ತಪ್ಪ ಹೀಗೆ ಹೇಳುವುದಕ್ಕೆ ಕಾರಣವೂ ಇದೆ. ಧೋನಿ ಕಳೆದ ವರ್ಷವೇ ನಿವೃತ್ತಿಯಾಗಬಹುದು ಎಂದು ಸೂಚನೆ ಸಿಕ್ಕಿತ್ತು. ಇದಕ್ಕೆ ಕಾರಣ ಅವರ ಮಂಡಿ ನೋವು. ಕಳೆದ ಸೀಸನ್ ಉದ್ದಕ್ಕೂ ಧೋನಿ ಮಂಡಿಗೆ ಐಸ್ ಪ್ಯಾಕ್ ಕಟ್ಟಿಕೊಂಡೇ ಆಡಿದ್ದರು. ಅವರಿಗೂ ಮತ್ತೆ ಕ್ರಿಕೆಟ್ ಕಣಕ್ಕೆ ಮರಳಬಹುದು ಎಂಬ ವಿಶ್ವಾಸವಿರಲಿಲ್ಲ. ಹೀಗಾಗಿ ಚೆನ್ನೈ ಮೈದಾನಕ್ಕೆ ಸುತ್ತು ಬಂದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದರು.
ನನ್ನ ಮಂಡಿ ಸಹಕರಿಸಿದರೆ ಮತ್ತೆ ಐಪಿಎಲ್ ನಲ್ಲಿ ಆಡುವ ಬಗ್ಗೆ ಯೋಚನೆ ಮಾಡುತ್ತೇನೆ ಎಂದಿದ್ದರು. ಇದೀಗ ಮತ್ತೊಂದು ಸೀಸನ್ ಗೆ ರೆಡಿಯಾಗಿದ್ದಾರೆ. ಆದರೆ ಉತ್ತಪ್ಪ ಪ್ರಕಾರ ಧೋನಿಗೆ ಇದು ಕೊನೆಯ ಐಪಿಎಲ್ ಆಗಿರಬಹುದು. ಅದಕ್ಕೆ ಕಾರಣ ಅವರ ಮಂಡಿ ಸಮಸ್ಯೆ. ಮುಂದೆ ಅವರಿಗೆ ಕೀಪಿಂಗ್ ಮಾಡುವುದು ಕಷ್ಟವಾಗಬಹುದು. ಹೀಗಾಗಿ ಮುಂದೆ ಕ್ರಿಕೆಟ್ ಕಣಕ್ಕೆ ಮರಳುವುದು ಅನುಮಾನ ಎಂದಿದ್ದಾರೆ.
ಚೆನ್ನೈ ಫ್ರಾಂಚೈಸಿ ಅವರು ವೀಲ್ ಚೇರ್ ನಲ್ಲಿ ಬಂದು ಮೈದಾನದಲ್ಲಿ ಆಡುತ್ತೇನೆಂದರೂ ಓಕೆ ಎನ್ನಬಹುದು. ವೀಲ್ ಚೇರ್ ನಲ್ಲಿ ಮೈದಾನದವರೆಗೆ ಬರುವುದು ಬ್ಯಾಟಿಂಗ್ ಮಾಡುವುದು ವಾಪಸ್ ಹೋಗುವುದು ಎಂದರೂ ಚೆನ್ನೈ ಫ್ರಾಂಚೈಸಿ ಒಪ್ಪಬಹುದು. ಅವರೂ ಬ್ಯಾಟಿಂಗ್ ಮಾಡಬಹುದು. ಆದರೆ ಕೀಪಿಂಗ್ ಮಾಡಲು ಅವರಿಗೆ ಕಷ್ಟ. ಮಂಡಿ ಈಗಾಗಲೇ ಹಾನಿಯಾಗಿದೆ. ಆದರೆ ಧೋನಿಗೆ ಕೀಪಿಂಗ್ ಇಷ್ಟ. ಆದರೆ ಕೀಪರ್ ಆಗಿ ತುಂಬಾ ಹೊತ್ತು ನಿಂತು ಅವರಿಗೆ ಅಲ್ಲಿ ಆಡಲು ಕಷ್ಟ. ಹೀಗಾಗಿ ಅವರು ಈ ಆವೃತ್ತಿ ಬಳಿಕ ನಿವೃತ್ತಿಯಾಗಬಹುದು ಎಂದು ಉತ್ತಪ್ಪ ಅಭಿಪ್ರಾಯಪಟ್ಟಿದ್ದಾರೆ.