ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಧೋನಿ, ಕೊಹ್ಲಿ, ದಿನೇಶ್ ಕಾರ್ತಿಕ್! ರೋಹಿತ್ ಅಚ್ಚರಿಯ ಹೇಳಿಕೆ

Krishnaveni K

ಶುಕ್ರವಾರ, 19 ಏಪ್ರಿಲ್ 2024 (09:48 IST)
ಮುಂಬೈ: ಐಪಿಎಲ್ ಮುಗಿದೊಡನೆ ಅಮೆರಿಕಾ ಮತ್ತು ವೆಸ್ಟ್ ಇಂಡೀಸ್ ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಗೆ ಭಾರತ ತಂಡದ ಆಯ್ಕೆ ಕುರಿತಂತೆ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಪಾಡ್ ಕಾಸ್ಟ್ ಒಂದರಲ್ಲಿ ನಾಯಕ ರೋಹಿತ್ ಶರ್ಮಾ ಆಸಕ್ತಿಕರ ವಿಚಾರಗಳನ್ನು ಹೊರಹಾಕಿದ್ದಾರೆ.

ಟಿ20 ವಿಶ್ವಕಪ್ ಗೆ ಧೋನಿ ಮತ್ತು ದಿನೇಶ್ ಕಾರ್ತಿಕ್ ರನ್ನು ತಂಡಕ್ಕೆ ಕರೆಯಿಸಿಕೊಳ್ಳುತ್ತೀರಾ ಎಂದು ಸಂದರ್ಶಕರು ಕೇಳಿದಾಗ ರೋಹಿತ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಧೋನಿ ಈಗಲೂ ಎಷ್ಟು ಇಂಪ್ಯಾಕ್ಟ್ ಮಾಡಬಲ್ಲರು ಎಂದು ಕಳೆದ ಮ್ಯಾಚ್ ನಲ್ಲಿ ತೋರಿಸಿಕೊಟ್ಟಿದ್ದರು. ಕೇವಲ 4 ಬಾಲ್ ನಲ್ಲಿ 20-22 ರನ್ ಹೊಡೆದರು. ಆ ರನ್ ಗಳು ತಂಡದ ಫಲಿತಾಂಶವನ್ನೇ ಬದಲಾಯಿಸಿತು.

ಧೋನಿಯನ್ನು ನಾನು ತಂಡಕ್ಕೆ ಕರೆಯಿಸಿಕೊಳ್ಳಲು ಇಷ್ಟಪಡುತ್ತೇನೆ. ಆದರೆ ಅವರು ಬರುತ್ತಾರೆ ಎಂದು ನನಗೆ ಅನಿಸುತ್ತಿಲ್ಲ. ಅವರೀಗ ತೀರಾ ಸುಸ್ತಾಗಿದ್ದಾರೆ. ವೆಸ್ಟ್ ಇಂಡೀಸ್ ಗಂತೂ ಅವರು ಬರಲ್ಲ. ಆದರೆ ಅಮೆರಿಕಾದಲ್ಲಿ ಅವರು ಇತ್ತೀಚೆಗೆ ಗಾಲ್ಫ್ ಆಡುತ್ತಿದ್ದು, ಅಮೆರಿಕಾದಲ್ಲಿ ಪಂದ್ಯ ನಡೆಯುವಾಗ ಬರಬಹುದು ಎಂದಿದ್ದಾರೆ.

ದಿನೇಶ್ ಕಾರ್ತಿಕ್ ಬಗ್ಗೆ ಕೇಳಿದಾಗ ರೋಹಿತ್ ‘ಡಿಕೆ ಬ್ಯಾಟಿಂಗ್ ನಿಜಕ್ಕೂ ಗಮನಾರ್ಹವಾಗಿತ್ತು. ಎರಡು ದಿನಗಳ ಹಿಂದೆ ಅವರು ಬ್ಯಾಟಿಂಗ್ ಮಾಡಿದ್ದು ಅವಿಸ್ಮರಣೀಯವಾಗಿತ್ತು. ಬಹುಶಃ ಡಿಕೆಯನ್ನು ಸುಲಭವಾಗಿ ಮನವೊಲಿಸಬಹುದು’ ಎಂದಿದ್ದಾರೆ. ಆರ್ ಸಿಬಿ ಪರ ದಿನೇಶ್ ಕಾರ್ತಿಕ್ ಫಿನಿಶರ್ ಆಗಿ ಆಡುತ್ತಿರುವುದು ನೋಡಿ ಅನೇಕರು ಈಗಾಗಲೇ ಡಿಕೆಯನ್ನು ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಿ ಎಂದು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ರೋಹಿತ್ ಈ ಹೇಳಿಕೆ ಕುತೂಹಲ ಮೂಡಿಸಿದೆ.

ಇನ್ನು, ವಿರಾಟ್ ಕೊಹ್ಲಿ ಈ ಟಿ20 ವಿಶ್ವಕಪ್ ನಲ್ಲಿ ತಂಡದ ಆರಂಭಿಕರಾಗಿ ಕಣಕ್ಕಿಳಿಯುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿರುವ ರೋಹಿತ್ ನಾವಿನ್ನೂ ಆ ಬಗ್ಗೆ ತೀರ್ಮಾನ ತೆಗೆದುಕೊಂಡಿಲ್ಲ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ