ನಾಟಕೀಯ ಕುಸಿತಕ್ಕೊಂದು ಬ್ರೇಕ್ ಹಾಕಿದ ಇಶಾಂತ್ ಶರ್ಮಾ, ವೃದ್ಧಿಮಾನ್ ಸಹಾ

ಮಂಗಳವಾರ, 7 ಮಾರ್ಚ್ 2017 (11:25 IST)
ಬೆಂಗಳೂರು:  ಒಬ್ಬ ಔಟಾದ ಮೇಲೆ ಒಬ್ಬರಾದ ಮೇಲೊಬ್ಬರಂತೆ ಪೆವಿಲಿಯನ್ ಗೆ ಬಾಲಕ್ಕೆ ಬೆಂಕಿ ಬಿದ್ದವರಂತೆ ಓಡುವುದು ಇದೀಗ ಟೀಂ ಇಂಡಿಯಾ ಚಾಳಿಯಾಗಿಬಿಟ್ಟಿದೆ. ದ್ವಿತೀಯ ಟೆಸ್ಟ್ ನ ದ್ವಿತೀಯ ಸರದಿಯಲ್ಲೂ ಅದೇ ರೀತಿ ಆಯಿತು. ಆದರೆ ಕೊನೆಯ ವಿಕೆಟ್ ಗೆ ಜತೆಯಾದ ಇಶಾಂತ್ ಶರ್ಮಾ-ವೃದ್ದಿಮಾನ್ ಸಹಾ ಇದಕ್ಕೊಂದು ಅಲ್ಪ ವಿರಾಮ ಹಾಕಿದರು.

 
ಸತತವಾಗಿ 3 ಓವರ್ ಮೇಡನ್ ಮಾಡಿ ವಿಕೆಟ್ ಉಳಿಸಿಕೊಂಡ ಈ ಜೋಡಿ ಕೊನೆಯ ವಿಕೆಟ್ ಗೆ 16 ರನ್ ಸೇರಿಸಿದರು. ಇದರಿಂದಾಗಿ ಭಾರತ ತನ್ನ ಮೊತ್ತವನ್ನು 274 ರನ್ ಗಳಿಗೆ ವಿಸ್ತರಿಸಿ ಆಲೌಟ್ ಆಯಿತು. ಮಹತ್ವದ 187 ರನ್ ಮುನ್ನಡೆ ಲಭಿಸಿತು. ಇದರಲ್ಲಿ ಸಹಾ  ಕೊಡುಗೆ 20 ರನ್ ಮತ್ತು ಇಶಾಂತ್ ಮಾಡಿದ್ದು 6 ರನ್.

ನಿನ್ನೆ ಚೇತೇಶ್ವರ ಪೂಜಾರ ಮತ್ತು ಅಜಿಂಕ್ಯಾ ರೆಹಾನೆ ಅವರ ಉತ್ತಮ ಜತೆಯಾಟದ ನೆರವಿನಿಂದ ಭಾರತ ಹಳಿಗೆ ಬಂತು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆ ಮಟ್ಟಿಗೆ ಭಾರತ ಸುಧಾರಿತ ಬ್ಯಾಟಿಂಗ್ ಪ್ರದರ್ಶಿಸಿತ್ತು. ನಿನ್ನೆ 213 ರನ್ ಗಳಿಸಿ 4 ವಿಕೆಟ್ ಕಳೆದುಕೊಂಡು ದಿನದಾಟ ಮುಗಿಸಿದ್ದ ಭಾರತ ಇಂದು ಮತ್ತೆ 45 ರನ್ ಗಳಿಸುವಷ್ಟರಲ್ಲಿ 5  ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೀಡಾಯಿತು.

ಇದರಿಂದಾಗಿ ಭಾರತ ದ್ವಿತೀಯ ಟೆಸ್ಟ್ ಪಂದ್ಯ ಗೆಲ್ಲಲು ಆಸ್ಟ್ರೇಲಿಯಾಕ್ಕೆ  188 ರನ್ ಗಳ ಅಲ್ಪ ಮೊತ್ತದ ಗುರಿ ನೀಡಿತು. ಬೆಳಗಿನ ಅವಧಿಯಲ್ಲಿ ಹೊಸ ಬಾಲ್ ತೆಗೆದುಕೊಂಡ ಮೇಲೆ ಆಟದ ಚಿತ್ರಣವೇ ಬದಲಾಯಿತು.  ಭಾರತದ ಕುಸಿತಕ್ಕೆ ನಾಂದಿಯಾಗಿದ್ದು ಅಜಿಂಕ್ಯಾ ರೆಹಾನೆ. ನಿನ್ನೆ 40 ರನ್ ಗಳಿಸಿ ಬ್ಯಾಟಿಂಗ್ ಕಾಯ್ದುಕೊಂಡಿದ್ದ ರೆಹಾನೆ ಇಂದು ಅರ್ಧಶತಕ ಗಳಿಸಿ ಹೇಝಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಕರುಣ್ ನಾಯರ್ ಬಂದ ಬಾಲ್ ಗೇ ಬೌಲ್ಡ್ ಆಗಿ ನಿರಾಸೆ ಮೂಡಿಸಿದರು.

ಇವರ ಬೆನ್ನು ಬೆನ್ನಿಗೇ ಒಬ್ಬರಾದ ಮೇಲೊಬ್ಬರಂತೆ ಹೇಝಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ನಿನ್ನೆ ಅರ್ಧ ಶತಕ ಗಳಿಸಿ ನಾಟೌಟ್ ಆಗಿದ್ದ ಚೇತೇಶ್ವರ ಪೂಜಾರ ಇಂದು 92 ರನ್ ಗಳಿಗೆ ಔಟಾಗುವ ಮೂಲಕ ಶತಕ ವಂಚಿತರಾದರು.  ಆಸೀಸ್ ಪರ ಹೇಝಲ್ ವುಡ್ 6 ವಿಕೆಟ್ ಕಬಳಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ