ಬಿಸಿಸಿಐ ಬೊಕ್ಕಸ ತುಂಬಿದ ಅಧ್ಯಕ್ಷ ಜಗಮೋಹನ್ ದಾಲ್ಮಿಯಾ ಇನ್ನಿಲ್ಲ

ಸೋಮವಾರ, 21 ಸೆಪ್ಟಂಬರ್ 2015 (10:34 IST)
ಕೊಲ್ಕತಾ:  ಬಿಸಿಸಿಐ ಅಧ್ಯಕ್ಷ, 36 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗೆ ಸೇವೆ ಸಲ್ಲಿಸಿದ ಜಗಮೋಹನ್ ದಾಲ್ಮಿಯಾ ಕೊಲ್ಕತಾದಲ್ಲಿ ಭಾನುವಾರ ವಿಧಿವಶರಾಗಿದ್ದಾರೆ. ಅವರಿಗೆ 75 ವರ್ಷಗಳಾಗಿತ್ತು. ದಾಲ್ಮಿಯಾ ಅವರು ಎದೆನೋವು ಮತ್ತು ಉಸಿರಾಟದ ತೊಂದರೆಗಳಿಂದ  ಬಿಎಂ ಬಿರ್ಲಾ ಆಸ್ಪತ್ರೆಗೆ ಸೇರಿದ್ದರು. ಅವರನ್ನು ವೈದ್ಯರು ಸೂಕ್ಷ್ಮವಾಗಿ ಗಮನಿಸುತ್ತಿದ್ದರು.
 
ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನಿರ್ವಹಿಸಿದ ಬಳಿಕ ಅವರ ಸ್ಥಿತಿ ಮೂರು ದಿನಗಳ ಕಾಲ ಸ್ಥಿರವಾಗಿತ್ತು. ಆದಾಗ್ಯೂ ಭಾನುವಾರ ರಾತ್ರಿ ಅವರು ಮೃತಪಟ್ಟಿದ್ದಾರೆಂದು ಘೋಷಿಸಲಾಯಿತು.
 
ದಾಲ್ಮಿಯಾ 36 ವರ್ಷಗಳ ಕಾಲ ಭಾರತೀಯ ಕ್ರಿಕೆಟ್‌ಗಾಗಿ ಅಪಾರ ಸೇವೆ ಸಲ್ಲಿಸಿದ್ದರು. ಸಾಯುವವರೆಗೆ ಕ್ರಿಕೆಟ್‌ಗಾಗಿ ದುಡಿದ ಕ್ರಿಕೆಟ್ ಅಪ್ರತಿಮ ನಾಯಕರು.  ಜಗ್ಗುದಾದಾ ದೊಡ್ಡ ಕ್ರಿಕೆಟರ್ ಆಗುವ ಕನಸು ಕಂಡಿದ್ದರು. ಇಡೀ ಕ್ರಿಕೆಟ್ ವಲಯವೇ ಅವರ ನೆನಪಿನ ಶೋಕಾಚರಣೆಯಲ್ಲಿದೆ. ಆದರೆ ಅವರು ಭಾರತೀಯ ಕ್ರಿಕೆಟ್‌ಗೆ ಸಲ್ಲಿಸಿದ ಸೇವೆಯಿಂದ ಎಂದೆಂದೂ ಅಜರಾಮರರಾಗಿದ್ದಾರೆ.  ಬಿಸಿಸಿಐ ಬೊಕ್ಕಸವನ್ನು ತುಂಬಿಸಿದ ಚಾಣಕ್ಯ ಅಧ್ಯಕ್ಷರಾಗಿದ್ದರು. ಅವರ ಮಾಸ್ಟರ್ ಐಡಿಯಾಗಳಿಂದ ಬಿಸಿಸಿಐ ಬೊಕ್ಕಸಕ್ಕೆ ಕೋಟ್ಯಂತರ ಹಣ ಹರಿದುಬಂತು. 
 
 ದಾಲ್ಮಿಯಾ ಬಿಸಿಸಿಐ ಅಧ್ಯಕ್ಷರಾದಾಗಿನಿಂದ ಅವರ ಆರೋಗ್ಯ ಸ್ಥಿತಿ ಕ್ಷೀಣಿಸಿತ್ತು. ಬಿಸಿಸಿಐನಲ್ಲಿ ಅವರ ಆರೋಗ್ಯ ವೈಫಲ್ಯದಿಂದಾಗಿ ಭಿನ್ನಮತದ ಧ್ವನಿಗಳು ಎದ್ದು, ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆಯಬೇಕೆಂದು ಕೂಡ ಕೆಲವರು ಒತ್ತಾಯಿಸಿದ್ದರು.  ಈಗ ದಾಲ್ಮಿಯಾಗೆ ಉತ್ತರಾಧಿಕಾರಿ ಯಾರೆಂಬ ಪ್ರಶ್ನೆ ಬಿಸಿಸಿಐನಲ್ಲಿ ಉದ್ಭವಿಸಿದೆ.
 

ವೆಬ್ದುನಿಯಾವನ್ನು ಓದಿ