ಎದುರಾಳಿಗಳಿಂದಲೂ ಚಪ್ಪಾಳೆ ಗಿಟ್ಟಿಸಿಕೊಂಡ ಕೆಎಲ್ ರಾಹುಲ್ ರ ಆ ಹೊಡೆತ!

ಕೃಷ್ಣವೇಣಿ ಕೆ

ಸೋಮವಾರ, 27 ಮಾರ್ಚ್ 2017 (16:50 IST)
ಧರ್ಮಶಾಲಾ:  ಕೆಎಲ್ ರಾಹುಲ್ ಸ್ಟ್ರೇಟ್ ಡ್ರೈವ್ ಹೊಡೆಯುವುದನ್ನು ನೋಡುವುದೇ ಚೆಂದ! ಕೈಯಲ್ಲಿ ಕುಂಚ ಹಿಡಿದಾಗ ಬಣ್ಣ ಬಳಿಯುವ ಕಲಾವಿದನಂತೆ ಅವರು ಡ್ರೈವ್ ಮಾಡುವುದನ್ನು ನೋಡಿದರೆ ಎದುರಾಳಿಗಳೂ ಗೊತ್ತಿಲ್ಲದೇ ಚಪ್ಪಾಳೆ ಹೊಡೆಯುತ್ತಾರೆ.

 

ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ 106 ರನ್ ಗಳ ಮೊತ್ತ ಬೆಂಬತ್ತುವಾಗ ಮೊದಲ ಓವರ್ ನಲ್ಲೇ ರಾಹುಲ್ ಇಂತಹದ್ದೊಂದು ಹೊಡೆತ ಹೊಡೆದು ವಾವ್ ಎನಿಸಿಕೊಂಡರು. ಸ್ಲಿಪ್ ನಲ್ಲಿ ಹ್ಯಾಂಡ್ಸ್ ಕೋಂಬ್ ತಮಗರಿವಿಲ್ಲದಂತೇ ಚಪ್ಪಾಳೆ ಹೊಡೆದರು.

 
ನಾಲ್ಕೂ ಟೆಸ್ಟ್ ಪಂದ್ಯಗಳಲ್ಲಿ ಅರ್ಧಶತಕ ದಾಖಲಿಸಿ ಅದ್ಭುತ ಫಾರ್ಮ್ ನಲ್ಲಿರುವ ರಾಹುಲ್ ಮೊದಲ ಓವರ್ ನಲ್ಲೇ ಮೂರು ಬೌಂಡರಿ ಗಳಿಸಿದರು. ಮೊದಲ ಇನಿಂಗ್ಸ್ ನಲ್ಲೂ ಅವರ ಕೆಲವೊಂದು ಬೌಂಡರಿ ಮನಸೂರೆಗೊಳ್ಳುವಂತಿತ್ತು.

 
ದ್ವಿತೀಯ ಇನಿಂಗ್ಸ್ ನಲ್ಲಿ ಆಸೀಸ್ 137 ರನ್ ಗಳಿಗೆ ಆಲೌಟ್ ಆಯಿತು. ಅಶ್ವಿನ್, ಜಡೇಜಾ ಮತ್ತು ಉಮೇಶ್ ಯಾದವ್ ತಲಾ 3 ವಿಕೆಟ್ ಹಂಚಿಕೊಂಡರು.  ದಿನದಂತ್ಯಕ್ಕೆ ಭಾರತ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿತ್ತು. ಇದೀಗ ಗೆಲುವಿಗೆ ಕೇವಲ 87 ರನ್ ಗಳಿಸಿದರೆ ಸಾಕು. ಇನ್ನೂ ಎರಡು ದಿನದ ಆಟ ಬಾಕಿಯಿದೆ. ಹಾಗಾಗಿ ನಾಳೆ ಗೆಲುವಿನ ಔಪಚಾರಿಕತೆಯೊಂದೇ ಬಾಕಿಯಿದೆ. ಹಾಗಿದ್ದರೂ ಎಚ್ಚರಿಕೆಯಿಂದ ಆಡಬೇಕಾದ ಅಗತ್ಯವಿದೆ.

 
ಪಿಚ್ ಸಂಪೂರ್ಣ ಬೌನ್ಸ್ ಮತ್ತು ತಿರುವು ಪಡೆಯುತ್ತಿರುವುದು ಎಚ್ಚರಿಕೆ ನೀಡಿದೆ. ಇಂದು ರವಿಚಂದ್ರನ್ ಅಶ್ವಿನ್ ಮತ್ತು ಜಡೇಜಾ ಬೌಲಿಂಗ್ ಮಾಡುತ್ತಿದ್ದರೆ, ಬಾಲ್ ಪಕ್ಕಾ ಡ್ಯಾನ್ಸ್ ಮಾಡುತ್ತಿತ್ತು. ಇದ್ದಕ್ಕಿದ್ದಂತೆ ಪುಟಿದೇಳುತ್ತಿದ್ದ ಬಾಲ್ ಆಸ್ಟ್ರೇಲಿಯಾ ಬ್ಯಾಟ್ಸ್ ಮನ್ ಗಳಿಗೆ ಆಡಲು ಕಠಿಣ ಸವಾಲೊಡ್ಡಿತ್ತು.

 
ಆದರೂ ಉಮೇಶ್ ಯಾದವ್ ಬೌನ್ಸರ್ ಗಳಿಗೆ ಉತ್ತರಿಸಲು ತಡಕಾಡುತ್ತಿದ್ದ ಆಸ್ಟ್ರೆಲಿಯಾ ತಂಡವನ್ನು ನೋಡಿದರೆ ನಿಜಕ್ಕೂ ಇದು ಆಸೀಸ್ ತಂಡವೇ ಎನ್ನುವ ಅನುಮಾನ ಕಾಡುತ್ತಿತ್ತು. ಆ ನಿಟ್ಟಿನಲ್ಲಿ ನೋಡಿದರೆ ಭಾರತ ತಂಡ ನಿಜಕ್ಕೂ ಪುಟಿದೇಳುವ ಬೌಲ್ ಗಳನ್ನು ಚೆನ್ನಾಗಿ ನಿಭಾಯಿಸಿತು. ಇದೀಗ  ಭಾರತದ ಜಯಕ್ಕೆ ಮೂರೇ ಗೇಣು!

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ