ಮೂರನೇ ಟೆಸ್ಟ್ ಗೆ ಮುನ್ನ ಫಿಟ್ನೆಸ್ ಬಗ್ಗೆ ಸಾಕ್ಷಿ ಕೊಟ್ಟ ಕೆಎಲ್ ರಾಹುಲ್

Krishnaveni K

ಸೋಮವಾರ, 12 ಫೆಬ್ರವರಿ 2024 (10:34 IST)
ಮುಂಬೈ: ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಅನುಭವಿ ಆಟಗಾರ ಕೆಎಲ್ ರಾಹುಲ್ ಆಡುವ ಬಗ್ಗೆ ಅವರೇ ಅಪ್ ಡೇಟ್ ಕೊಟ್ಟಿದ್ದಾರೆ.

ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಮೊನ್ನೆಯಷ್ಟೇ ತಂಡ ಘೋಷಣೆಯಾಗಿತ್ತು. ಈ ತಂಡದಲ್ಲಿ ಗಾಯಗೊಂಡಿದ್ದ ಕೆಎಲ್ ರಾಹುಲ್ ಮತ್ತು ರವೀಂದ್ರ ಜಡೇಜಾ ಕೂಡಾ ಸೇರ್ಪಡೆಯಾಗಿದ್ದಾರೆ. ಆದರೆ ಈ ಇಬ್ಬರೂ ಫಿಟ್ನೆಸ್ ಟೆಸ್ಟ್ ಪಾಸಾದರೆ ಮಾತ್ರ ಮೂರನೇ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ ಎಂದು ಬಿಸಿಸಿಐ ಪ್ರಕಟಣೆ ತಿಳಿಸಿತ್ತು.

ಫಿಟ್ನೆಸ್ ಬಗ್ಗೆ ಸಾಕ್ಷಿ ಕೊಟ್ಟ ಕೆಎಲ್ ರಾಹುಲ್
ಮೊದಲ ಟೆಸ್ಟ್ ಪಂದ್ಯದಲ್ಲಿ ಆಡಿದ್ದ ರಾಹುಲ್ ಎರಡನೇ ಪಂದ್ಯದ ವೇಳೆಗೆ ತೊಡೆ ನೋವಿನಿಂದಾಗಿ ಹೊರಗುಳಿದಿದ್ದರು. ಇದೀಗ ಮೂರನೇ ಪಂದ್ಯಕ್ಕೆ ಅವರು ಫಿಟ್ನೆಸ್ ಸಾಬೀತುಪಡಿಸಬೇಕಿದೆ. ಸದ್ಯಕ್ಕೆ ರಾಹುಲ್ ಬ್ಯಾಟಿಂಗ್ ಅಭ್ಯಾಸ ನಡೆಸುತ್ತಿರುವ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿದ್ದಾರೆ. ಆ ಮೂಲಕ ತಾವು ಆಡಲು ಸಮರ್ಥರಿರುವುದಾಗಿ ಸುಳಿವು ನೀಡಿದ್ದಾರೆ.

ಮೂರನೇ ಟೆಸ್ಟ್ ಪಂದ್ಯಕ್ಕೆ ಇನ್ನೂ ಮೂರು ದಿನ ಬಾಕಿಯಿದ್ದು, ಆ ವೇಳೆಗೆ ರಾಹುಲ್ ಫಿಟ್ ಆಗಿ ಆಡಬಹುದು ಎಂಬ ನಿರೀಕ್ಷೆಯಿದೆ. ಈ ಫೋಟೋ ನೋಡಿದ ಮೇಲೆ ಅಭಿಮಾನಿಗಳು ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಒಂದೆಡೆ ಕೊಹ್ಲಿ ಅನುಪಸ್ಥಿತಿ, ಇನ್ನೊಂದೆಡೆ ಶ್ರೇಯಸ್ ಅಯ್ಯರ್ ಕೂಡಾ ಗಾಯದಿಂದ ಹೊರಗುಳಿದಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ತಂಡಕ್ಕೆ ಅನುಭವಿ ಆಟಗಾರರೊಬ್ಬರ ಅಗತ್ಯವಿದೆ. ಆ ಸ್ಥಾನವನ್ನು ರಾಹುಲ್ ತುಂಬಬೇಕಿದೆ. ಹೀಗಾಗಿ ರಾಹುಲ್ ಫಿಟ್ ಆಗಿ ತಂಡಕ್ಕೆ ಮರಳುವುದು ಅನಿವಾರ್ಯವಾಗಿದೆ. ಅವರ ಜೊತೆಗೆ ರವೀಂದ್ರ ಜಡೇಜಾ ಕೂಡಾ ಫಿಟ್ನೆಸ್ ಮರಳಿ ಪಡೆಯಬಹುದು ಎಂಬ ವಿಶ್ವಾಸವಿದೆ. ಯಾಕೆಂದರೆ ಮೂರನೇ ಪಂದ್ಯ ಜಡೇಜಾ ತವರು ರಾಜ್ ಕೋಟ್ ನಲ್ಲೇ ನಡೆಯಲಿದೆ. ಹೀಗಾಗಿ ಅವರೂ ಆಡಲು ಉತ್ಸುಕರಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ