ಟೀಂ ಇಂಡಿಯಾ ಗೆಲುವಿಗೆ ರೊಚ್ಚಿಗೆದ್ದು ಮೈದಾನದಲ್ಲೇ ದುಂಡಾವರ್ತನೆ ತೋರಿದ ಲಂಕಾ ಅಭಿಮಾನಿಗಳು

ಸೋಮವಾರ, 28 ಆಗಸ್ಟ್ 2017 (09:01 IST)
ಪಲ್ಲಿಕೆಲೆ: ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವುದು ಇದಕ್ಕೇ ಇರಬೇಕು. ಲಂಕಾ ಮತ್ತೊಮ್ಮೆ ಬಾಯಿಯವರೆಗೆ ಬಂದಿದ್ದ ಗೆಲುವಿನ ಅದೃಷ್ಟವನ್ನು ತಾನೇ ಕೈಚೆಲ್ಲಿತು.


ಟೀಂ ಇಂಡಿಯಾ ಸೋಲುತ್ತಿದ್ದ ಪಂದ್ಯವನ್ನು ರೋಹಿತ್ ಶರ್ಮಾ-ಧೋನಿ ಆಟದಿಂದ ತನ್ನ ಜೋಳಿಗೆಗೆ ಸೇರಿಸಿಕೊಂಡಿತು. ಅತ್ತ ರೊಚ್ಚಗೆದ್ದ ಲಂಕಾ ಅಭಿಮಾನಿಗಳು ಪ್ರತಿಭಟನೆ ನಡೆಸಿದರು. ಕೈಗೆ ಸಿಕ್ಕಿದ ವಸ್ತುಗಳನ್ನು ಮೈದಾನಕ್ಕೆ ತೂರಲು ಪ್ರಾರಂಭಿಸಿದಾಗ ಆಟ ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಕೊನೆಗೆ ಪ್ರೇಕ್ಷಕರು ಆಕ್ರೋಶದಿಂದ ಪಂದ್ಯ ಮುಗಿಯುವ ಮೊದಲೇ ಮೈದಾನ ಬಿಟ್ಟು ತೆರಳಿದರು.

ತೃತೀಯ ಏಕದಿನ ಪಂದ್ಯವನ್ನು ಗೆಲ್ಲುವ ಎಲ್ಲಾ ಅವಕಾಶ ಲಂಕಾಗಿತ್ತು. ಗೆಲುವಿಗೆ ಸಾಧಾರಣ ಮೊತ್ತವೆನಿಸಿದ್ದ 218 ರನ್ ಗಳ ಗುರಿ ಬೆನ್ನತ್ತಿದ್ದ ಭಾರತಕ್ಕೆ ಮತ್ತೆ ದ್ವಿತೀಯ ಪಂದ್ಯದಂತೇ ಮಧ್ಯಮ ಕ್ರಮಾಂಕ ಕೈಕೊಟ್ಟಿತ್ತು. ನಾಯಕ ಕೊಹ್ಲಿ ಕೇವಲ 5 ರನ್ ಗಳಿಸಿದರೆ, ಕೆಎಲ್ ರಾಹುಲ್ ಮತ್ತು ಕೇದಾರ್ ಜಾದವ್ ರನ್ನು ಬೆನ್ನು ಬೆನ್ನಿಗೇ ಅಖಿಲಾ ಧನಂಜಯ ಬಲಿ ಪಡೆದರು.

ಹೀಗಾಗಿ 61 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ ಮತ್ತೆ ದ್ವಿತೀಯ ಪಂದ್ಯದಂತೆ ಬಂಡೆಯಂತೆ ನಿಂತ ಧೋನಿ, ಆರಂಭಿಕ ರೋಹಿತ್ ಶರ್ಮಾ ಜತೆಗೂಡಿ ತಂಡವನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಿದರು. ಇವರಲ್ಲಿ ಧೋನಿ ಕೊಡುಗೆ 67 ಮತ್ತು ರೋಹಿತ್ ಆಕರ್ಷಕ ಶತಕ (127) ಬಾರಿಸಿದರು. ಇದರೊಂದಿಗೆ ಭಾರತ ಐದು ಪಂದ್ಯಗಳ ಸರಣಿಯನ್ನು ಎರಡು ಪಂದ್ಯಗಳು ಬಾಕಿಯಿರುವಂತೆಯೇ ಗೆದ್ದುಕೊಂಡಿತು.

ಇದನ್ನೂ ಓದಿ.. ಈಕೆ ಈಗ ಭಾರತದ ‘ಸಿಂಧೂ’ರ ತಿಲಕ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ