ಧೋನಿ ಅವರು ಮುಂದಿನ ಅಕ್ಟೋಬರ್‌ನಲ್ಲಿ ಮಾತ್ರ ನ್ಯೂಜಿಲೆಂಡ್ ವಿರುದ್ಧ ಸೀಮಿತ ಓವರುಗಳ ಸರಣಿ ಆಡಲಿದ್ದಾರೆ. ಅಲ್ಲಿಯವರೆಗೆ ಧೋನಿಗೆ ವಿಶ್ರಾಂತಿ. ಈ ಕುರಿತು ಹೇಳಿದ ಧೋನಿ, ಸುದೀರ್ಘ ಕಾಲದ ಬಳಿಕ ನಾನು ಕ್ರಿಕೆಟ್‌ನಿಂದ ಸ್ವಲ್ಪ ಕಾಲ ವಿಶ್ರಾಂತಿ ಪಡೆಯುತ್ತಿದ್ದೇನೆ. ನನ್ನ ಪುತ್ರಿ (15 ತಿಂಗಳ ಜಿವಾ) ಈಗಲೂ ನನ್ನನ್ನು ಗುರುತಿಸುತ್ತಾಳೆಂಬ ನಂಬಿಕೆ ನನಗಿಲ್ಲ. ನನಗೆ ಸಿಗುವ ವಿಶ್ರಾಂತಿ ಅವಧಿಯಲ್ಲಿ ನನ್ನ ಪುತ್ರಿಗೆ ತಾನು ಅವಳ ತಂದೆ ಎಂಬ ಭಾವನೆ ಉಂಟುಮಾಡಿ ಕುಟುಂಬದ ಜತೆ ಕಾಲ ಕಳೆಯುತ್ತೇನೆ ಎಂದು ಧೋನಿ ನಗೆಚಟಾಕಿ ಹಾರಿಸಿದರು.
ಇದೇ ಸಂದರ್ಭದಲ್ಲಿ ಗಂಭೀರವದನರಾಗಿ, ಜಿಂಬಾಬ್ವೆಯನ್ನು ಮೂರು ಏಕದಿನಗಳಲ್ಲಿ 168, 126 ಮತ್ತು 123ಕ್ಕೆ ಔಟ್ ಮಾಡಿದ ಬೌಲರುಗಳ ಪ್ರಯತ್ನದಿಂದ ತಮಗೆ ತೃಪ್ತಿಯಾಗಿದ್ದಾಗಿ ತಿಳಿಸಿದರು. ವೇಗದ ಬೌಲರುಗಳು ಮತ್ತು ಸ್ಪಿನ್ನರುಗಳು ಎದುರಾಳಿ ತಂಡದ ಮೇಲೆ ಒತ್ತಡ ಹೇರಿ ವಿಕೆಟ್ ಕಬಳಿಸಿದ್ದು ತಮಗೆ ಅವರ ಬೌಲಿಂಗ್ ಪ್ರದರ್ಶನದಿಂದ ಸಂತಸವಾಗಿದೆ ಎಂದು ಧೋನಿ ಪಂದ್ಯದ ನಂತರ ತಿಳಿಸಿದರು.