ಬೆಂಗಳೂರು: ಶನಿವಾರ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸಿಎಸ್ ಕೆ ನಡುವಿನ ಪಂದ್ಯದ ಟಿಕೆಟ್ ಗೆ ಭಾರೀ ಡಿಮ್ಯಾಂಡ್ ಇದೆ. ಇದೀಗ ವ್ಯಕ್ತಿಯೊಬ್ಬ ಈ ಐಪಿಎಲ್ ಪಂದ್ಯದ ಟಿಕೆಟ್ ಖರೀದಿಸಲು ಹೋಗಿ 3 ಲಕ್ಷ ರೂ. ಕಳೆದುಕೊಂಡಿದ್ದಾನೆ.
ಬೆಂಗಳೂರು ಮೂಲದ 28 ವರ್ಷದ ಯುವಕ ಈ ಮಹತ್ವದ ಪಂದ್ಯದ ಟಿಕೆಟ್ ಗಾಗಿ ಹುಡುಕಾಡುತ್ತಿದ್ದರು. ಈ ವೇಳೆ ಇನ್ ಸ್ಟಾಗ್ರಾಂನಲ್ಲಿ ಪದ್ಮ ಸಿನ್ಹ ವಿಜಯ್ ಕುಮಾರ್ ಎಂಬಾತನೊಬ್ಬ ತನ್ನ ಬಳಿ ಮೂರು ಟಿಕೆಟ್ ಇರುವುದಾಗಿ ಸಂದೇಶ ಪ್ರಕಟಿಸಿದ್ದ. ಆತನ ಸಂದೇಶ ನಂಬಿ ಯುವಕ ಪ್ರತೀ ಟಿಕೆಟ್ ಗೆ 2,300 ರೂ. ಕೊಟ್ಟು ಖರೀದಿಸಲು ಮುಂದಾಗಿದ್ದ.
ಆತ ತನ್ನ ಆಧಾರ್ ಕಾರ್ಡ್, ಫೋನ್ ನಂಬರ್ ವಿವರವನ್ನೂ ನೀಡಿದ್ದರಿಂದ ಯುವಕನಿಗೆ ವಂಚನೆಯ ಅರಿವಾಗಲೇ ಇಲ್ಲ. ಆದರೆ ಮೂರು ಟಿಕೆಟ್ ಗೆ ದುಡ್ಡು ಕೊಟ್ಟ ಮೇಲೂ ಟಿಕೆಟ್ ಬಂದಿರಲಿಲ್ಲ. ಇದನ್ನು ಕೇಳಿದಾಗ ಆತ ತಾಂತ್ರಿಕ ಸಮಸ್ಯೆಯಾಗಿದೆ. ಇನ್ನೊಮ್ಮೆ ದುಡ್ಡು ಕಳುಹಿಸಿ, ಸರಿಯಾದ ಮೇಲೆ ಹೆಚ್ಚುವರಿ ಹಣ ವಾಪಸ್ ಮಾಡುವುದಾಗಿ ಹೇಳಿದ್ದ.
ಇದೇ ರೀತಿ ಪದೇ ಪದೇ ಹಣ ಕೇಳಿ ಒಟ್ಟು 3 ಲಕ್ಷ ರೂ. ಎಗರಿಸಿದ್ದ. ಇದಾದ ಬಳಿಕ ಆತನ ವಂಚನೆ ಬಗ್ಗೆ ಅನುಮಾನಗೊಂಡು ಯುವಕ ಪೊಲೀಸರಿಗೆ ದೂರು ನೀಡಿದ್ದ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸಿದ್ದಾರೆ.
ಆರ್ ಸಿಬಿ ಈ ಪಂದ್ಯದಲ್ಲಿ ಗೆದ್ದರೆ ಪ್ಲೇ ಆಫ್ ಪ್ರವೇಶಿಸಲಿದೆ. ಜೊತೆಗೆ ಧೋನಿಯ ಕೊನೆಯ ಪಂದ್ಯ ಇದಾಗಿರಬಹುದು. ಹೀಗಾಗಿ ಈ ಪಂದ್ಯದ ಟಿಕೆಟ್ ಗೆ ಬೇಡಿಕೆ ಹೆಚ್ಚಾಗಿದೆ. ಇದನ್ನೇ ಗಮನದಲ್ಲಿಟ್ಟುಕೊಂಡು ವಂಚಕರೂ ತಮ್ಮ ಆಟ ಶುರು ಮಾಡಿದ್ದಾರೆ. ಹೀಗಾಗಿ ಇಂತಹ ಸಂದೇಶಗಳಿಂದ ಎಚ್ಚರವಾಗಿರುವುದು ಒಳ್ಳೆಯದು.