ಯುಎಇ ಅನಿವಾಸಿ ಕನ್ನಡಿಗರ ಕಣ್ಮನ ತಣಿಸಿದ ಮಂಗಳೂರು ಕಪ್ - 2015

ಮಂಗಳವಾರ, 10 ಮಾರ್ಚ್ 2015 (18:42 IST)
ಸಚಿತ್ರ ವರದಿ : ಯಹ್ಯಾ ಅಬ್ಬಾಸ್ ಉಜಿರೆ / ಅಬುಧಾಬಿ
   
ಅಬುಧಾಬಿ :  ಮಂಗಳೂರು ಕಪ್ ನ ತೃತೀಯ ಋತುವಿನ ಕ್ರಿಕೆಟ್ ಪಂದ್ಯಾಟ ನಿರೀಕ್ಷೆಯಂತೆ ಪೈಪೋಟಿಯುತವಾಗಿ ನಡೆಯಿತು. ಅನಿವಾಸಿ ಕನ್ನಡಿಗರ ಕ್ರೀಡಾ ಪ್ರೇಮಕ್ಕೆ ಇಂಬು ನೀಡುವಂತೆ ಅರಬ್ ಸಂಯುಕ್ತ ಸಂಸ್ಥಾನದ ಏಳು ಎಮಿರೈಟ್‌ಗಳಿಂದ ಆಗಮಿಸಿದ ಬರೋಬ್ಬರಿ 20 ಕ್ರಿಕೆಟ್ ತಂಡಗಳು ಜಿದ್ದಾ ಜಿದ್ದಿನ ಹೋರಾಟದ ಮೂಲಕ ಕದನ ಕುತೂಹಲ ಕೆರಳಿಸಿತ್ತು.
 
     
ಶೇಖ್ ಝಾಯೆದ್ ಕ್ರೀಡಾಂಗಣದಲ್ಲಿ   ಒಟ್ಟು ಸೇರಿದ್ದ  ಅನಿವಾಸಿ ಕನ್ನಡಿಗರಿಗೆ ಹಬ್ಬದ ವಾತಾವರಣ. ಕರ್ನಾಟಕ ಕರಾವಳಿಯ ಮತ್ತು ಘಟ್ಟ ಪ್ರದೇಶದ ಹೆಚ್ಚಿನ  ತಂಡಗಳು ಭಾಗವಹಿಸಿದ್ದ ಈ ಕ್ರೀಡಾ ಕೂಟ ನಿಜಕ್ಕೂ ಅನಿವಾಸಿಗಳಿಗೆ ರಸದೌತಣವನ್ನೇ ಉಣಬಡಿಸಿತು . ತಾಯ್ನಾಡಿನ ತಂಡಗಳ ನಡುವಿನ ಕ್ರಿಕೆಟ್ ಸಮರ ಹುಮ್ಮಸ್ಸು ಒಂದೆಡೆಯಾದರೆ,  ವಾರಾಂತ್ಯದಲ್ಲಿ ಸಿಗುವ ಸಮಯದಲ್ಲಿ ತನ್ನೂರಿನ ಗಡಣದ ಜೊತೆ ಬೆರೆಯುವ  ಖುಷಿ  ನೆರೆದಿದ್ದ ಜನಸಂದಣಿಯ ವದನಗಳಲ್ಲಿ ಎದ್ದು ಕಾಣುತಿತ್ತು.

ಅಂದಹಾಗೆ ಅನಿವಾಸಿಗಳನ್ನು ಬಿಟ್ಟೂ ಬಿಡದೆ ಕಾಡುವ ತಾಯ್ನಾಡಿನ ನೆನಪು, ಮೂಲದೆಡೆಗಿನ ತುಡಿತ, ವಾಂಛೆಗಳು ಮೇಳೈಸಿದಂತಿತ್ತು,  ಎಲ್ಲೆಡೆ ಕನ್ನಡ, ತುಳು, ಬ್ಯಾರಿ, ಕೊಂಕಣಿ ಬಾಷೆಯಲ್ಲಿ ಜನರು ಉಭಯ ಕುಶಲೋಪರಿ ನಡೆಸುತ್ತಾ ಜೊತೆ ಜೊತೆಯಾಗಿ ಕ್ರಿಕೆಟ್ ಪಂದ್ಯಗಳನ್ನು ವೀಕ್ಷಿಸುತಿದ್ದರು. ಒಟ್ಟಾರೆಯಾಗಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕನ್ನಡಿಗರ ಈ ಝಲಕ್ ಕಣ್ಮನ ಸೆಳೆಯುವಂತಿತ್ತು. 
 
     
ಕ್ರೀಡಾ ಕಾರ್ಯಕ್ರಮ ಉದ್ಘಾಟಿಸಿ  ಮಾತನಾಡಿದ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಮ್ಯೂಸಿಕ್ ಅಂಡ್ ಆರ್ಟ್ಸ್ ನ ಮುಖ್ಯಸ್ಥ ವಿನ್ಸೆಂಟ್ ಡಿಸಿಲ್ವ ಎಂಸಿಸಿಯ ಕಾರ್ಯ ಯೋಜನೆಗಳನ್ನು ಶ್ಲಾಘಿಸಿದರು. ಅರಬ್ ಸಂಯುಕ್ತ ಸಂಸ್ಥಾನದ ಇತ್ತೀಚಿನ ದಿನಗಳಲ್ಲಿ ಕ್ರಿಕೆಟ್ ನ ಜನಪ್ರಿಯತೆ ಹೆಚ್ಚುತ್ತಿರುವುದ ಸಂತಸದಾಯಕ ವಿಚಾರ ಎಂದು ನುಡಿದರು
     ‘’ಮಂಗಳೂರು ಕಪ್‌ನ  ತೃತೀಯ ಋತುವಿನ ಕ್ರಿಕೆಟ್ ಪಂದ್ಯಾಟ ಕಳೆದ ಭಾರಿಗಿಂತ ಹೆಚ್ಚು ವ್ಯವಸ್ತಿತವಾಗಿ  ಅಂತರಾಷ್ಟ್ರೀಯ ಹುಲ್ಲಿನ ಅಂಗಣದಲ್ಲಿ ಹಮ್ಮಿಕೊಂಡಿರುವುದು ಕ್ರೀಡಾಳುಗಳಲ್ಲಿ  ಹೆಚ್ಚಿನ ಉತ್ಸಾಹ ತುಂಬುವುದು ದಿಟ ಎಂದ ಅವರು, ಎಲ್ಲ ತಂಡಗಳಿಗೂ ಶುಭ ಹಾರೈಸಿ, ಕ್ರೀಡಾಪಟುತ್ವದೊಂದಿಗೆ ಆಡುವಂತೆ ತಂಡಗಳಿಗೆ ಕಿವಿ ಮಾತು ಹೇಳಿದರು.
 
       ಪಂದ್ಯಾವಳಿಯ ಅಂತಿಮ ಹಣಾಹಣಿಯಲ್ಲಿ ಟಾಸ್ ಗೆದ್ದು ಕೊಂಡ  ಸುರತ್ಕಲ್ ಸ್ಟಾರ್ ತಂಡ ಎದುರಾಳಿ ಆಕ್ಸ್ಫರ್ಡ್ ಮರೀನ್ ತಂಡ ವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿತು. ಬದ್ರುದ್ದೀನ್ ಬೌಲಿಂಗ್ ದಾಳಿಗೆ ತತ್ತರಿಸಿದ ಆಕ್ಸ್ಫರ್ಡ್ ಮರೀನ್ ನಿಗದಿತ ಐದು ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 25 ರನ್ ಪೇರಿಸಿತು.  ಬದ್ರುದ್ದೀನ್ ತನ್ನ ಕರಾರುವಕ್ಕಾದ ದಾಳಿ ಮತ್ತು ಆಕ್ರಮಣಕಾರಿ ಎಸೆತಗಳಿಂದ 3 ವಿಕೆಟ್ ಗಳಿಸಿದರು.  
 
      ಸುರತ್ಕಲ್ ಸ್ಟಾರ್ ತಂಡವನ್ನು ಕಟ್ಟಿಹಾಕಲು ಆಕ್ಸ್‌ಫರ್ಡ್ ಮರೀನ್ ನ ಬೌಲಿಂಗ್ ದಂಡು ಶ್ರಮಿಸಿದರಾದರೂ ರೋವೆಲ್ ನ     ಸಿಕ್ಸ್ ಮತ್ತು ಶಶಿ ಯವರ ಬೌಂಡರಿ ನೆರವಿನಿಂದ  4.5 ಓವರ್ ನಲ್ಲಿ ಸುರತ್ಕಲ್ ಸ್ಟಾರ್ ವಿಜಯದ ನಗೆ ಬೀರಿತು..
 
 ಸುರತ್ಕಲ್ ಸ್ಟಾರ್ ತಂಡ 2013 ರಲ್ಲಿ ನಫಿಸ್ ದುಬೈ ತಂಡದೆದುರು ಜಯದಾಖಲಿಸಿ ಕಪ್ ತನ್ನ ಮುಡಿಗೇರಿಸಿಕೊಂಡಿತ್ತು  ಇದೀಗ ಸತತ       
 ದ್ವೀತೀಯ ಬಾರಿಗೆ   ಮಂಗಳೂರು ಕಪ್ ನ ಪ್ರಶಸ್ತಿ  ಬಾಚಿಕೊಂಡ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
 
    ಸೇಫ್ ಲೈನ್ ಮತ್ತು ಎಂಸಿಸಿ ಅಬುಧಾಬಿ ತಂಡಗಳು ಪಂದ್ಯಾವಳಿಯ ಸೆಮಿಫೈನಲ್ ಹಂತದವರೆಗೆ ತಲುಪಿದ್ದರು. ಕ್ರಮವಾಗಿ ಆಕ್ಸ್ಫರ್ಡ್ ಮರೀನ್ ಮತ್ತು ಸುರತ್ಕಲ್ ಸ್ಟಾರ್ ತಂಡಗಳು ಅವರಿಗೆ ಸೋಲುಣಿಸಿ ಫೈನಲ್ ಗೆ ತೇರ್ಗಡೆ ಹೊಂದಿದ್ದರು. ಮಂಗಳೂರು ಕಪ್ 2014  ಚಾಂಪಿಯನ್ ತಂಡಗಳಾದ ಯಂಗ್ ಇಂಡಿಯನ್ಸ್ ಮತ್ತು ಅಲ್ ಸಿತಾರ ತಂಡಗಳು  ಈ ಬಾರಿ ಲೀಗ್ ಹಂತದ ಪಂದ್ಯಾವಳಿಯಲ್ಲೇ ಅತಿಥೇಯ ತಂಡಗಳಿಗೆ ಶರಣಾದವು.
 
ಅತ್ಯಾಕರ್ಷಕ ಟ್ರೋಫಿ ಮತ್ತು 7017/ -AED ಮೊತ್ತವನ್ನು ತನ್ನದಾಗಿಸಿಕೊಂಡಿತು. ( ಬಹುಮಾನ ಮೊತ್ತದ  ಪ್ರಾಯೋಜಕರು ಅಬು ಮೊಹಮ್ಮದ್ ಕಾರ್ಯನಿರ್ವಹಣಾ ಮುಖ್ಯಸ್ಥರು ಮಲ್ಟಿ ಲೈನ್ ಅಬುಧಾಬಿ, ಟ್ರೋಫಿಯ ಪ್ರಾಯೋಜಕರು -  ಪ್ರವಾಸಿ ಉದ್ಯೋಗ ಭಾರತಿ ಪ್ರಶಸ್ತಿ ಪುರಸ್ಕೃತ  ಶೇಖ್  ಬಾವ ಹಾಜಿ - ಪ್ರಧಾನ ಕಾರ್ಯದರ್ಶಿ ಕರ್ನಾಟಕ ಕಲ್ಚರಲ್ ಫೌಂಡೇಶನ್ ಯುಎಇ) 
 
ರನ್ನರ್ ಅಪ್ ಆಗಿ  ಮೂಡಿಬಂದ ಅಲ್ ಸಿತಾರ ತಂಡಕ್ಕೆ  ಟ್ರೋಫಿ ಮತ್ತು 4014/ -AED ಮೊತ್ತ  ವಿತರಿಸಲಾಯಿತು.( ಬಹುಮಾನ ಮೊತ್ತದ ಪ್ರಾಯೋಜಕರು ರೊನಾಲ್ಡ್ ಪಿಂಟೋ ಕಾರ್ಯನಿರ್ವಹಣಾ ಮುಖ್ಯಸ್ಥರು ಹಿಸ್ನ ಇಂಟರ್ನ್ಯಾಷನಲ್ ಮುಖ್ಯಸ್ಥರು   ಟ್ರೋಫಿಯ ಪ್ರಾಯೋಜಕರು -  ಅಕ್ರಮ್ ಕಾರ್ಯನಿರ್ವಹಣಾ ಮುಖ್ಯಸ್ಥರು  ಅಲ್ ಸಿತಾರ ಗ್ರೂಪ್) 
 
 

ವೆಬ್ದುನಿಯಾವನ್ನು ಓದಿ