ಮ್ಯಾಚ್ ಫಿಕ್ಸಿಂಗ್ ಆರೋಪ: ಧೋನಿಯಿಂದ ಹಿಂದಿ ಡೈಲಿ ಪತ್ರಿಕೆ ವಿರುದ್ಧ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಬೆದರಿಕೆ

ಶುಕ್ರವಾರ, 12 ಫೆಬ್ರವರಿ 2016 (20:59 IST)
ಕಳೆದ 2014ರಲ್ಲಿ ನಡೆದ ಇಂಗ್ಲೆಂಡ್ ಪ್ರವಾಸದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಭಾರತ ತಂಡದ ಕ್ಯಾಪ್ಟನ್ ಮ್ಯಾಚ್ ಫಿಕ್ಸ್ ಮಾಡಿದ್ದರು ಎಂದು ಡಿಡಿಸಿಎ ಕಾರ್ಯದರ್ಶಿ ಸುನೀಲ್ ದೇವ್ ಆರೋಪಿಸುವ ದೃಶ್ಯಗಳಿರುವ ಕುಟುಕು ಕಾರ್ಯಾಚರಣೆಗೈದ ಹಿಂದಿ ಡೈಲಿ ವಿರುದ್ಧ, ಧೋನಿ ಲೀಗಲ್ ನೋಟಿಸ್ ಜಾರಿಗೊಳಿಸಿದ್ದು 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
 
ಡಿಡಿಸಿಎ ಕಾರ್ಯದರ್ಶಿ ಸುನೀಲ್ ದೇವ್ ಆರೋಪಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಕೇವಲ ಸುಳ್ಳು ವರದಿ ಹರಡಿಸುವ ಕುತಂತ್ರವಾಗಿದೆ.ಮ್ಯಾಚ್‌ ಫಿಕ್ಸಿಂಗ್‌ ಆರೋಪ ಧೋನಿ ಗೌರವಕ್ಕೆ ಧಕ್ಕೆ ಬಳೆಯುವಂತಹ ಕೃತ್ಯವಾಗಿದೆ ಎಂದು ಧೋನಿ ಪರ ವಕೀಲರು ಒಂಬತ್ತು ಪುಟಗಳ ನೋಟಿಸ್‌ನ್ನು ಹಿಂದಿ ಡೈಲಿ ಪತ್ರಿಕೆಗೆ ರವಾನಿಸಿದ್ದಾರೆ. 
 
ನಿಮ್ಮ ಪತ್ರಿಕೆಯಲ್ಲಿ ಪ್ರಕಟವಾದ ವರದಿಯಿಂದ ನಮ್ಮ ಕಕ್ಷಿದಾರ ಧೋನಿಯವರ ಗೌರವಕ್ಕೆ ಧಕ್ಕೆಯಾಗಿದ್ದಲ್ಲದೇ ಮಾನಸಿಕವಾಗಿ ತೊಂದರೆಯಾಗಿದ್ದರಿಂದ, ನಿಮ್ಮ ಸಂಸ್ಥೆ ಮೇಲೆ ಯಾಕೆ 100 ಕೋಟಿ ರೂ ಮಾನನಷ್ಟ ಮೊಕದ್ದಮೆ ಹೂಡಬಾರದು ಎಂದು ಧೋನಿ ಪರ ವಕೀಲರು ಹಿಂದಿ ಡೈಲಿ ಪತ್ರಿಕೆಗೆ ನೋಟಿಸ್ ಜಾರಿಗೊಳಿಸಿದ್ದರು.  
 
ಆದರೆ, ಡಿಡಿಸಿಎ ಕಾರ್ಯದರ್ಶಿ ಸುನೀಲ್ ದವೆ, ಧೋನಿ ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದಾರೆ ಎಂದು ನಾನು ಹೇಳಿಕೆ ನೀಡಿಯೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 
 
ಇಂಗ್ಲೆಂಡ್‌ ಪ್ರವಾಸದಲ್ಲಿದ್ದಾಗ ಮ್ಯಾಂಚೆಸ್ಟರ್‌ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ, ಬೌಲಿಂಗ್ ಸ್ನೇಹಿಯಾಗಿದ್ದ ಪಿಚ್‌ನಲ್ಲಿ ಟಾಸ್ ಗೆದ್ದಿದ್ದರೂ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಮ್ಯಾಚ್ ಫಿಕ್ಸಿಂಗ್‌ನಲ್ಲಿ ಪಾಲ್ಗೊಂಡಿದ್ದರು ಎಂದು ದೇವ್ ಆರೋಪವನ್ನು ಹಿಂದಿ ಡೈಲಿ ಪತ್ರಿಕೆ ವಿಡಿಯೋ ಬಿಡುಗಡೆಗೊಳಿಸಿತ್ತು. 
 
ಆ ಟೆಸ್ಟ್ ಪಂದ್ಯದಲ್ಲಿ ಭಾರತ ಎದುರಾಳಿ ಇಂಗ್ಲೆಂಡ್ ತಂಡದ ವಿರುದ್ಧ ಇನ್ನಿಂಗ್ಸ್ ಮತ್ತು 54 ರನ್‌ಗಳಿಂದ ಸೋಲನುಭವಿಸಿತ್ತು.

ವೆಬ್ದುನಿಯಾವನ್ನು ಓದಿ