ಬೆಂಗಳೂರು: ಈ ಬಾರಿಯ ಐಪಿಎಲ್ 2024 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಿಂದ ಅರಳಿದ ಹೊಸ ಪ್ರತಿಭೆ ಮಯಾಂಕ್ ಯಾದವ್. ಅವರ ಈಗಿನ ಪ್ರದರ್ಶನ ಗಮನಿಸುತ್ತಿದ್ದರೆ ಸದ್ಯದಲ್ಲೇ ಟೀಂ ಇಂಡಿಯಾ ಕರೆ ಪಕ್ಕಾ ಎನ್ನಲಾಗುತ್ತಿದೆ.
ಕಳೆದ ಬಾರಿ ಐಪಿಎಲ್ ನಲ್ಲಿ ಉಮ್ರಾನ್ ಮಲಿಕ್ ವೇಗದ ಎಸೆತದ ಮೂಲಕ ಎಲ್ಲರೂ ನಿಬ್ಬೆರಗಾಗುವಂತೆ ಮಾಡಿದರು. ಆದರೆ ಉಮ್ರಾನ್ ಗೆ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿದ್ದು ಕಡಿಮೆ. ಸಿಕ್ಕರೂ ಅವರು ಸರಿಯಾಗಿ ಬಳಸಿಕೊಳ್ಳುವಲ್ಲಿ ವಿಫಲರಾಗಿದ್ದರು.
ಇದೀಗ ಈ ಐಪಿಎಲ್ ನಲ್ಲಿ ಮಯಾಂಕ್ ಯಾದವ್ ಸತತವಾಗಿ 150 ಕಿ.ಮೀ. ವೇಗದಲ್ಲಿ ಚೆಂಡೆಸೆದು ಎಲ್ಲರೂ ಬೆರಗಾಗುವಂತೆ ಮಾಡಿದ್ದಾರೆ. ಲಕ್ನೋಗೆ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಗೆಲುವು ಕೊಡಿಸಲು ಮಯಾಂಕ್ ವೇಗದ ಎಸೆತಗಳೇ ಕಾರಣ. ಪಂಜಾಬ್ ಮತ್ತು ಆರ್ ಸಿಬಿ ಬ್ಯಾಟಿಗರಿಗೆ ಮಯಾಂಕ್ ವೇಗದ ಎಸೆತವನ್ನು ಎದುರಿಸಲಾಗಲಿಲ್ಲ.
ವಿಶೇಷವೆಂದರೆ ವೇಗದ ಜೊತೆಗೆ ಮಯಾಂಕ್ ಗೆ ನಿಯಂತ್ರಣ ಕೂಡಾ ಸಾಧಿಸಲು ಸಾಧ್ಯವಾಗುತ್ತಿದೆ. ಹೀಗಾಗಿ ಸರಿಯಾದ ನಿಟ್ಟಿನಲ್ಲಿ ತಮ್ಮ ಪ್ರತಿಭೆ ಬಳಸಿಕೊಂಡರೆ ಮಯಾಂಕ್ ಮುಂದೆ ಟೀಂ ಇಂಡಿಯಾದ ಭವಿಷ್ಯದ ತಾರೆಯಾಗಲಿದ್ದಾರೆ.