ಭಾರತದ ಬೌಲಿಂಗ್ ದಾಳಿಯ ಹೊಸ ಮುಖ ಜಸ್‌ಪ್ರೀತ್ ಬುಮ್ರಾ

ಶನಿವಾರ, 12 ಮಾರ್ಚ್ 2016 (15:08 IST)
ಐಸಿಸಿ ವಿಶ್ವಕಪ್ ಈಗಾಗಲೇ ಈ ವರ್ಷ ಸಾಕಷ್ಟು ಸದ್ದು ಮಾಡುತ್ತಿದ್ದು, ಈ ಭವ್ಯ ಪಂದ್ಯಾವಳಿಯು ಇಡೀ ಜಗತ್ತಿನ ಗಮನ ಸೆಳೆದಿದೆ.  ಭಾರತದ ಎಂ.ಎಸ್. ಧೋನಿ ಮತ್ತು ವಿರಾಟ್ ಕೊಹ್ಲಿ ಅವರಂಥ ಘಟಾನುಘಟಿ ಆಟಗಾರರ ಮೇಲೆ ಸಂಪೂರ್ಣ ಗಮನ ನೆಟ್ಟಿದ್ದರೆ, ಬ್ಲೂ ಟೀಂನ ಯುವ ಆಟಗಾರರ ಕಡೆ ಗಮನಹರಿಯುತ್ತಿಲ್ಲ.ಭಾರತದ ಕ್ರಿಕೆಟ್‌ಗೆ ಇತ್ತೀಚೆಗೆ ತಿರುವು ನೀಡುತ್ತಿರುವ ಅಂತಹ ಒಬ್ಬ ಯುವ ಆಟಗಾರ ಬಲಗೈ ಮಧ್ಯಮ ವೇಗಿ ಬೌಲರ್ ಜಸ್‌ಪ್ರೀತ್ ಬುಮ್ರಾ. 
 
 ಗುಜರಾತ್ ಅಂಡರ್ 19 ತಂಡದಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಜಸ್‌ಪ್ರೀತ್ ಮುಂಬೈ ಇಂಡಿಯನ್ಸ್‌ ಪರ ಐಪಿಎಲ್‌ನಲ್ಲಿ 2013ರಲ್ಲಿ ಚೊಚ್ಚಲ ಪ್ರವೇಶ ಪಡೆದಾಗ ಎಲ್ಲರ ಗಮನ ಸೆಳೆದರು. ಅದೇ ಪಂದ್ಯದಲ್ಲಿ ಅವರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು 32 ರನ್‌ಗಳಿಗೆ 3 ವಿಕೆಟ್ ಕಬಳಿಸುವ ಮೂಲಕ ನಾಶ ಮಾಡಿದರು. ಇದರಿಂದ ರಾಷ್ಟ್ರೀಯ ಆಯ್ಕೆದಾರರು ಟೀಂ ಇಂಡಿಯಾ ಪಟ್ಟಿಯನ್ನು ಪುನರಾಲೋಚಿಸುವಂತಾಯಿತು.
 
 ಇತ್ತೀಚಿನ ಕೆಲವು ಸರಣಿಗಳಲ್ಲಿ ಕೂಡ ಜಸ್‌ಪ್ರೀತ್ ಸ್ಟಾರ್ ಆಟಗಾರನಾಗಿ ಹೊಮ್ಮಿದರು. ಶ್ರೀಲಂಕಾದಲ್ಲಿ ಸರಣಿ ಅಥವಾ ಬಾಂಗ್ಲಾ ಟಿ 20 ಸರಣಿಯಾಗಿರಲಿ, ಸದೃಢ ಬೌಲರ್‌ ಆಗಿ ಅವರು ಹೊರಹೊಮ್ಮಿದರು. ಅಹ್ಮದಾಬಾದ್ ಮೂಲದ ಜಸ್‌ಪ್ರೀತ್ ಪಂಜಾಬಿ ಸಿಖ್ ಕುಟುಂಬಕ್ಕೆ ಜನಿಸಿದರು. ಬಾಲ್ಯದಿಂದ ಕ್ರಿಕೆಟ್ ಗೀಳು ಹಿಡಿದಿದ್ದ ಜಸ್‌ಪ್ರೀತ್ ವಿದ್ಯಾಭ್ಯಾಸದಲ್ಲಿ ಆಸಕ್ತಿ ತೋರಿಸಲೇ ಇಲ್ಲ.
 
 ಜಸ್‌ಪ್ರೀತ್ ಬುಮ್ರಾ ಮೊದಲ ದರ್ಜೆ ಕ್ರಿಕೆಟ್‌ಗೆ ಪ್ರವೇಶಿಸುವ ಮುನ್ನವೇ ಮುಂಬೈ ಇಂಡಿಯನ್ಸ್‌ಗೆ ಸಹಿಹಾಕಿದ್ದರೆಂದು ತಿಳಿಯಲು ಅಚ್ಚರಿಯೆನಿಸುತ್ತದೆ.  ಬುಮ್ರಾ 2012-13ರಲ್ಲಿ ಟಿ 20 ಚೊಚ್ಚಲ ಪ್ರವೇಶ ಮಾಡಿ ತಮ್ಮ ತಂಡ ಪ್ರಶಸ್ತಿ ಗೆಲ್ಲುವುದಕ್ಕೆ ನೆರವಾದರು ಮತ್ತು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಪುರಸ್ಕೃತರಾದರು. ಅವರ ಇತ್ತೀಚಿನ ಟಿ 20 ಪ್ರದರ್ಶನದಿಂದ ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಗಳಿಸಿದ್ದಾರೆ. ಅವರ ಇನ್‌ಸ್ಟಾ ಗ್ರಾಂ ಖಾತೆಗೆ ಕೂಡ ಅಭಿಮಾನಿಗಳಿಂದ ಪ್ರೀತಿಯ ಸಿಂಚನ ಹರಿದಿದೆ.

ವೆಬ್ದುನಿಯಾವನ್ನು ಓದಿ