ಫೈನಲ್ ಗೂ ಮೊದಲು ಇಂಗ್ಲೆಂಡ್ ಎಚ್ಚರಿಕೆ ನೀಡಿದ ಮಿಥಾಲಿ ರಾಜ್
ಭಾನುವಾರ, 23 ಜುಲೈ 2017 (08:08 IST)
ಲಂಡನ್: ಭಾರತದ ಮಹಿಳಾ ಕ್ರಿಕೆಟ್ ತಂಡ ಇಂದು ಲಾರ್ಡ್ಸ್ ಅಂಗಣದಲ್ಲಿ ವಿಶ್ವಕಪ್ ಫೈನಲ್ ಪಂದ್ಯವಾಡಲಿದ್ದು, ಹೊಸ ದಾಖಲೆ ಬರೆಯಲಿದೆ. ಈಗಾಗಲೇ ಬಲಿಷ್ಠ ಆಸ್ಟ್ರೇಲಿಯಾ ವನಿತೆಯರನ್ನು ಸೋಲಿಸಿದ ಆತ್ಮ ವಿಶ್ವಾಸದಲ್ಲಿರುವ ಭಾರತ ಇಂಗ್ಲೆಂಡ್ ಗೆ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಭಾರತ ಈಗಾಗಲೇ ಮೊದಲ ಪಂದ್ಯವನ್ನು ಇದೇ ಇಂಗ್ಲೆಂಡ್ ವಿರುದ್ಧ ಆಡಿ ಗೆದ್ದಿತ್ತು. ವಿಶೇಷವೆಂದರೆ ಕೊನೆಯ ಪಂದ್ಯದಲ್ಲೂ ಇದೇ ಎರಡೂ ತಂಡಗಳು ಎದುರಾಗುತ್ತಿವೆ. ಹಿಂದಿನ ಪಂದ್ಯ ಸೋತರೂ ಆಂಗ್ಲರು ಕಪ್ ಗೆಲ್ಲುವ ಫೇವರಿಟ್ ತಂಡವಾಗಿದ್ದಾರೆ.
ಆದರೆ ಭಾರತದ ವನಿತೆಯರು ಈ ಟೂರ್ನಿಯುದ್ದಕ್ಕೂ ಪ್ರದರ್ಶನ ಗಮನಿಸಿದರೆ, ಯಾವಾಗ ತಿರುಗಿ ಬೀಳುತ್ತಾರೆಂದು ಹೇಳುವ ಹಾಗಿಲ್ಲ. ಆರಂಭಿಕರು ಕೈ ಕೊಟ್ಟರು ಮಧ್ಯಮ ಕ್ರಮಾಂಕ ಬಲಿಷ್ಠವಾಗಿರುವುದು ಭಾರತದ ಪ್ಲಸ್ ಪಾಯಿಂಟ್. ಬೌಲಿಂಗ್ ಕೂಡಾ ಉತ್ತಮವಾಗಿಯೇ ಇದೆ. ಆದರೆ ಫೀಲ್ಡಿಂಗ್ ನಲ್ಲಿ ಇನ್ನೂ ಕೊಂಚ ಸುಧಾರಿಸಬೇಕಿದೆ.
ಅತ್ತ ಇಂಗ್ಲೆಂಡ್ ಪರ ಜೆನ್ನಿ ಗನ್ ಪ್ರಮುಖ ಬ್ಯಾಟ್ಸ್ ಮನ್. ಭಾರತದ ಹರ್ಮನ್ ಪ್ರೀತ್ ಮತ್ತು ಜೆನ್ನಿ ನಡುವೆ ಬ್ಯಾಟಿಂಗ್ ಕದನ ನಿರೀಕ್ಷಿಸಲಾಗಿದೆ. ಎರಡನೇ ಬಾರಿಗೆ ವಿಶ್ವಕಪ್ ಫೈನಲ್ ತಲುಪಿರುವ ಭಾರತ ಈ ಟೂರ್ನಮೆಂಟ್ ಉದ್ದಕ್ಕೂ ದೈತ್ಯ ಸಂಹಾರಿಯಾಗಿದೆ. ಹಾಗಾಗಿ ಎರಡನೇ ಪ್ರಯತ್ನದಲ್ಲಿ ಗೆಲುವು ದಾಖಲಿಸಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಲಿ ಎಂಬುದೇ ಎಲ್ಲರ ಹಾರೈಕೆ.