ಟೀಂ ಇಂಡಿಯಾಗೆ ಪ್ರೋತ್ಸಾಹಿಸಲು ಅಮೆರಿಕದ ಭಾರತೀಯ ಸಮುದಾಯಕ್ಕೆ ಧೋನಿ ಕರೆ

ಸೋಮವಾರ, 31 ಆಗಸ್ಟ್ 2015 (16:19 IST)
ಅಮೆರಿಕದಲ್ಲಿ ಅಪರೂಪಕ್ಕೆ ಸಾರ್ವಜನಿಕರಿಗೆ ದರ್ಶನ ನೀಡಿದ ಭಾರತ ತಂಡದ ಏಕದಿನ ನಾಯಕ ಮಹೇಂದ್ರ ಸಿಂಗ್ ಧೋನಿ ಭಾರತೀಯ ಸಮುದಾಯದ ಜತೆ ಸಂವಾದ ನಡೆಸಿ ಕ್ರಿಕೆಟ್ ತಂಡಕ್ಕೆ ಸದಾ ಬೆಂಬಲವನ್ನು ಮುಂದುವರಿಸುವಂತೆ ಕರೆ ನೀಡಿದರು. ಭಾರತ ಕ್ರಿಕೆಟ್ ತಂಡ ಸಾಕಷ್ಟು ಬದಲಾವಣೆಗೆ ಒಳಪಡುತ್ತಿದ್ದು, ನಾವು ಉತ್ತಮ ತಂಡ ಹೊಂದಿದ್ದೇವೆ. ಆದರೆ ನಿಮ್ಮ ಬೆಂಬಲದಿಂದ ಉತ್ತಮವಾಗಿ ಆಡುವುದನ್ನು ನಾವು ಮುಂದುವರಿಸುತ್ತೇವೆ ಎಂದು ಧೋನಿ ಸಿದ್ಧಿವಿನಾಯಕ ಮಂದಿರದಲ್ಲಿ ಭಾರತೀಯರ ಜತೆ ಸಂವಾದದಲ್ಲಿ ಹೇಳಿದರು.
 
ಧೋನಿ ತಮ್ಮ ಪತ್ನಿ ಸಾಕ್ಷಿ ಮತ್ತು ಜಾರ್ಖಂಡ್  ಮಾಜಿ ಉಪಮುಖ್ಯಮಂತ್ರಿ ಸುದೇಶ್ ಕುಮಾರ್ ಮಹ್ತೊ ಜತೆ ಮಂದಿರಕ್ಕೆ ತೆರಳಿದ್ದ ಅವರು ಪೂಜೆಯನ್ನು ನಿರ್ವಹಿಸಿದರು. 
 
ಜೀನ್ಸ್ ಮತ್ತು ಟಿ ಶರ್ಟ್ ಧರಿಸಿದ್ದ ಧೋನಿ, ಅಮೆರಿಕದಲ್ಲಿ ತಾವು ಸಾರ್ವಜನಿಕರ ಜತೆ ಬೆರೆತಿದ್ದು ಇದೇ ಮೊದಲ ಬಾರಿಯಾಗಿದೆ ಎಂದು ಹೇಳಿದರು.  ಈ ಮುಂಚೆ ಅಮೆರಿಕಕ್ಕೆ ಬಂದಾಗಲೆಲ್ಲಾ ಅವರು ಸಾರ್ವಜನಿಕ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರಲಿಲ್ಲ ಮತ್ತು ಕುಟುಂಬದೊಂದಿಗೆ ಖಾಸಗಿ ಸಮಯ ಕಳೆಯುತ್ತಿದ್ದರು.
 
ಭಾರತೀಯ ಸಮುದಾಯ ಅಮೆರಿಕದ ಸಂಸ್ಕೃತಿಗೆ ಒಗ್ಗಿಕೊಂಡರೂ ಅದೇ ಸಂದರ್ಭದಲ್ಲಿ ಭಾರತದ ಪರಂಪರೆ ಅನುಸರಿಸುತ್ತಿರುವುದು ತಮಗೆ ಕಣ್ಣು ತೆರೆಸಿದೆ ಎಂದು ಧೋನಿ ಹೇಳಿದರು.

ಅಮೆರಿಕಕ್ಕೆ ವಲಸೆ ಬಂದು ಅನೇಕ ವರ್ಷಗಳ ಬಳಿಕವೂ ಶೇ. 200ರಷ್ಟು ಅಪ್ಪಟ ಭಾರತೀಯರಾಗಿ ಭಾರತ ದೇಶದ ಸಂಪ್ರದಾಯಗಳಿಗೆ ಗೌರವಿಸುತ್ತಿರುವುದನ್ನು ಶ್ಲಾಘಿಸಿದ ಧೋನಿ ಇದನ್ನು ಪ್ರತಿಯೊಬ್ಬರೂ ಕಲಿಯಬೇಕು ಎಂದು ಹೇಳಿದರು. ಮೊದಲ ಮತ್ತು ಎರಡನೇ ಪೀಳಿಗೆಯ ಭಾರತೀಯ ಮೂಲದ ಅಮೆರಿಕನ್ನರು ಜೀವನದ ವಿವಿಧ ಅಂಶಗಳ ಬಗ್ಗೆ ಮಕ್ಕಳಿಗೆ ಬೋಧಿಸುವ ವಿಧಾನವನ್ನು ಕೂಡ ಧೋನಿ ಶ್ಲಾಘಿಸಿದರು. 
 

ವೆಬ್ದುನಿಯಾವನ್ನು ಓದಿ