ರೋಹಿತ್ ಶರ್ಮಾಗೆ ಮೋಸ! ಒಗ್ಗಟ್ಟಾದ ಮುಂಬೈ ಇಂಡಿಯನ್ಸ್ ಆಟಗಾರರು?!
ಭಾನುವಾರ, 17 ಡಿಸೆಂಬರ್ 2023 (11:06 IST)
Photo Courtesy: Twitter
ಮುಂಬೈ: ಯಾರೇ ಬಂದರೂ ಈ ಬಾರಿ ಐಪಿಎಲ್ ನಲ್ಲಿ ರೋಹಿತ್ ಶರ್ಮಾರೇ ನಾಯಕರಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದೇ ಎಲ್ಲರ ನಂಬಿಕೆಯಾಗಿತ್ತು.
ಆದರೆ ಕೊನೆಯ ಕ್ಷಣದಲ್ಲಿ ಹಾರ್ದಿಕ್ ಪಾಂಡ್ಯರನ್ನು ಕರೆತಂದು ದಿಡೀರ್ ಆಗಿ ರೋಹಿತ್ ರನ್ನು ಕಿತ್ತುಹಾಕಿ ಪಾಂಡ್ಯಗೆ ನಾಯಕತ್ವ ಪಟ್ಟ ನೀಡಿದ್ದು, ಮುಂಬೈ ತಂಡದೊಳಗೇ ಭಿನ್ನಮತ ಸ್ಪೋಟಗೊಳ್ಳುವಂತೆ ಮಾಡಿದೆ ಎಂದು ವರದಿಯಾಗುತ್ತಿದೆ.
ರೋಹಿತ್ ರನ್ನು ನಾಯಕತ್ವದಿಂದ ಕೆಳಗಿಳಿಸಿದ ಬೆನ್ನಲ್ಲೇ ಬುಮ್ರಾ, ಸೂರ್ಯಕುಮಾರ್ ಯಾದವ್ ಇನ್ ಸ್ಟಾಗ್ರಾಂ ಮೂಲಕ ಪರೋಕ್ಷವಾಗಿ ಅಸಮಾಧಾನ ಹೊರಹಾಕಿದ್ದರು. ಆದರೆ ವಿವಾದವಾಗುತ್ತಿದ್ದಂತೇ ಬುಮ್ರಾ ಸಂದೇಶ ಡಿಲೀಟ್ ಮಾಡಿದ್ದರು. ಆದರೆ ಸೂರ್ಯ ಚೂರಾದ ಹೃದಯದ ಇಮೋಜಿ ಹಾಕಿಕೊಂಡಿದ್ದರು.
ರೋಹಿತ್ ಗೆ ಯಾವುದೇ ಮುನ್ಸೂಚನೆ ಇಲ್ಲದೇ ಮುಂಬೈ ಫ್ರಾಂಚೈಸಿ ನಾಯಕತ್ವದಿಂದ ಕೆಳಗಿಳಿಸಿ ಮೋಸ ಮಾಡಿತಾ ಎಂಬ ಅನುಮಾನ ಮೂಡುತ್ತಿದೆ. ಇದೇ ಕಾರಣಕ್ಕೆ ಮುಂಬೈ ಇಂಡಿಯನ್ಸ್ ತಂಡದಲ್ಲಿರುವ ಟೀಂ ಇಂಡಿಯಾ ಆಟಗಾರರು ಫ್ರಾಂಚೈಸಿ ವಿರುದ್ಧವೇ ಅಸಮಾಧಾನಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದೆ.
ಇದೀಗ ಏನೇ ಅಸಮಾಧಾನವಿದ್ದರೂ ಟ್ರೇಡಿಂಗ್ ವಿಂಡೋ ಮುಗಿದಿದ್ದು, ರಿಲೀಸ್ ಮಾಡುವ ಆಟಗಾರರ ಪಟ್ಟಿಯೂ ಅಂತಿಮಗೊಳಿಸಲಾಗಿದೆ. ಈ ಹಂತದಲ್ಲಿ ಯಾವುದೇ ಆಟಗಾರರಿಗೂ ತಂಡದಿಂದ ಹೊರನಡೆಯಲು ಸಾಧ್ಯವಾಗದ ಸಂದಿಗ್ಧ ಪರಿಸ್ಥಿತಿಯಿದೆ.
ಇನ್ನೊಂದು ಮೂಲಗಳ ಪ್ರಕಾರ ಹಾರ್ದಿಕ್ ಪಾಂಡ್ಯ ಮುಂಬೈಗೆ ಮರಳುವ ಮೊದಲು ತಮಗೆ ನಾಯಕತ್ವ ನೀಡಿದರೆ ಮಾತ್ರ ಮರಳುವುದಾಗಿ ಷರತ್ತು ಹಾಕಿದ್ದರು ಎನ್ನಲಾಗಿದೆ. ಇದೇ ಕಾರಣಕ್ಕೆ ಅವರಿಗೆ ನಾಯಕತ್ವ ನೀಡಲಾಗಿದೆ ಎಂಬ ಸುದ್ದಿಯೂ ಇದೆ. ಆದರೆ ಸೂರ್ಯ, ಬುಮ್ರಾ, ಇಶಾನ್ ಸೇರಿದಂತೆ ತಂಡದ ಪ್ರಮುಖ ಆಟಗಾರರು ರೋಹಿತ್ ಗೆ ನಿಷ್ಠರಾಗಿದ್ದಾರೆ. ಹೀಗಿರುವಾಗ ಈ ಬಾರಿ ಮುಂಬೈ ಒಗ್ಗಟ್ಟಾಗಿ ಆಡುವುದು ಹೇಗೆ ಎಂಬ ಪ್ರಶ್ನೆ ಮೂಡಿದೆ.