ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಜಯ: ನ್ಯೂಜಿಲೆಂಡ್‌ ವಿರುದ್ಧ ಸರಣಿ ಗೆಲುವು

ಭಾನುವಾರ, 21 ಜೂನ್ 2015 (17:23 IST)
ಬೈರ್‌ಸ್ಟೋ ಮನೋಜ್ಞ ಅಜೇಯ 83 ರನ್ ನೆರವಿನಿಂದ ನ್ಯೂಜಿಲೆಂಡ್ ವಿರುದ್ಧ ಇಂಗ್ಲೆಂಡ್ ಡಕ್‌ವರ್ತ್ ಲೂಯಿಸ್ ನಿಯಮದಡಿ ಗೆಲುವು ಗಳಿಸುವ ಮೂಲಕ   ಐದು ಪಂದ್ಯಗಳ ಸರಣಿಯಲ್ಲಿ 3-2ರಿಂದ ಇಂಗ್ಲೆಂಡ್  ಸರಣಿ ಜಯಗಳಿಸಿದೆ.  ಮಳೆಯಿಂದ ಪೀಡಿತವಾದ ಅಂತಿಮ ಪಂದ್ಯದಲ್ಲಿ ಬೈರ್‌ಸ್ಟೋ ಅವರ ಅಬ್ಬರದ ಆಟದಿಂದಾಗಿ 6 ಎಸೆತಗಳು ಬಾಕಿವುಳಿದಿರುವಂತೆ ಇಂಗ್ಲೆಂಡ್ 26 ಓವರುಗಳಲ್ಲಿ 192 ರನ್ ಬೆನ್ನಟ್ಟಿ ಜಯಗಳಿಸಿತು.

  50 ಓವರುಗಳಲ್ಲಿ 283 ರನ್ ಬಾರಿಸಿದ್ದ ವಿಶ್ವಕಪ್ ರನ್ನರ್ ಅಪ್ ನ್ಯೂಜಿಲೆಂಡ್ ಆರಂಭದಲ್ಲೇ ಇಂಗ್ಲೆಂಡ್ ವಿಕೆಟ್ ಕಬಳಿಸುವ ಮೂಲಕ ಆರಾಮವಾಗಿ ಗೆಲ್ಲುವ ಲಕ್ಷಣ ಕಂಡುಬಂದಿತ್ತು. ಆದರೆ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಬೈರ್‌ಸ್ಟೋ ಅಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರಿಂದ ಇಂಗ್ಲೆಂಡ್ ಗೆಲುವಿನ ಗುರಿ ಮುಟ್ಟಿತು.  ಇಂಗ್ಲೆಂಡ್ ಪರ ಸ್ಯಾಮ್ ಬಿಲ್ಲಿಂಗ್ಸ್ 30 ಎಸೆತಗಳಲ್ಲಿ 41 ರನ್ ಹೊಡೆದರು. ಬೈರ್ ಸ್ಟೋ ಸ್ಕೋರಿನಲ್ಲಿ  11 ಬೌಂಡರಿಗಳಿದ್ದವು.

 ಮೊದಲಿಗೆ ಬ್ಯಾಟಿಂಗ್ ಆಡಿದ್ದ ನ್ಯೂಜಿಲೆಂಡ್ ಪರ ಮಾರ್ಟಿನ್ ಗಪ್ಟಿಲ್ 67 ರನ್ ಮತ್ತು ರೋಸ್ ಟೇಲರ್ 47 ರನ್ ಬಾರಿಸಿ 9 ವಿಕೆಟ್‌ಗೆ 283 ರನ್ ಸ್ಕೋರ್ ಮಾಡಿದ್ದರು. ಆದರೆ ಆಟಕ್ಕೆ ಮಳೆ ಅಡ್ಡಿಯಿಂದಾಗಿ ಡಕ್ ವರ್ತ್ ಲೂಯಿಸ್ ವಿಧಾನದಡಿ  ಇಂಗ್ಲೆಂಡ್‌ಗೆ  26 ಓವರುಗಳಲ್ಲಿ 192 ರನ್ ಗುರಿಯನ್ನು ಇರಿಸಲಾಗಿತ್ತು. 
 

ವೆಬ್ದುನಿಯಾವನ್ನು ಓದಿ