ನ್ಯೂಜಿಲೆಂಡ್‌ಗೆ ಆಸ್ಟ್ರೇಲಿಯಾ ವಿರುದ್ಧ 1 ವಿಕೆಟ್ ರೋಚಕ ಗೆಲುವು

ಶನಿವಾರ, 28 ಫೆಬ್ರವರಿ 2015 (14:02 IST)
ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ನಡುವೆ ಪಂದ್ಯ ರೋಚಕ ತಿರುವು ಪಡೆದುಕೊಂಡು ಒಂದು ಹಂತದಲ್ಲಿ ಆಸ್ಟ್ರೇಲಿಯಾ ಗೆಲ್ಲಬಹುದೆಂದು ಭಾವಿಸಲಾಗಿತ್ತು. ಆದರೆ ಕೊನೆಯ ವಿಕೆಟ್‌ಗೆ ನ್ಯೂಜಿಲೆಂಡ್ ಆಸ್ಟ್ರೇಲಿಯಾದ ಕಡಿಮೆ ಸ್ಕೋರಾದ 151 ರನ್‌ ಗಡಿಯನ್ನು ಮುಟ್ಟಿ 9 ವಿಕೆಟ್ ಕಳೆದುಕೊಂಡು 152 ರನ್ ಗಳಿಸುವ ಮೂಲಕ ಜಯಗಳಿಸಿದೆ.

ಕೇನ್ ವಿಲಿಯಂಸನ್ ಅವರ 42 ಎಸೆತಗಳಿಗೆ ಅಜೇಯ 45 ರನ್ ಮತ್ತು ಆರಂಭದಲ್ಲೇ ಮೆಕಲಮ್ ಅಬ್ಬರದ ಬ್ಯಾಟಿಂಗ್ ಮಾಡಿ 24 ಎಸೆತಗಳಲ್ಲಿ 50 ರನ್ ಸಿಡಿಸಿದ್ದರ ನೆರವಿನಿಂದ ನ್ಯೂಜಿಲೆಂಡ್ ಇನ್ನೂ ಒಂದು ವಿಕೆಟ್ ಬಾಕಿಯಿರುವಂತೆ ಆಸ್ಟ್ರೇಲಿಯಾ ಸ್ಕೋರನ್ನು ದಾಟಿ ನಿಟ್ಟುಸಿರು ಬಿಟ್ಟಿದೆ. ನ್ಯೂಜಿಲೆಂಡ್ ಒಂದು ಹಂತದಲ್ಲಿ 79 ರನ್‌ಗೆ ನಾಲ್ಕು ವಿಕೆಟ್ ಕಳೆದುಕೊಂಡು ಶೋಚನೀಯ ಸ್ಥಿತಿಯಲ್ಲಿತ್ತು.

ಮಿಚೆಲ್ ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ನ್ಯೂಜಿಲೆಂಡ್ 6 ವಿಕೆಟ್‌ಗಳನ್ನು ಅವರಿಗೆ ಒಪ್ಪಿಸಿದೆ. ಸ್ಟಾರ್ಕ್ ಅವರ ಮಾರಕ ಬೌಲಿಂಗ್ ದಾಳಿ ಎಷ್ಟು ಮೊನಚಾಗಿತ್ತೆಂದರೆ  ರಾಸ್ ಟೇಲರ್, ಎಲಿಯಟ್, ಅಡಾಂ ಮಿಲ್ನೆ, ಸೌತೀ ಎಲ್ಲರೂ ಅವರ ವೇಗದ ದಾಳಿಗೆ ಬೌಲ್ಡ್ ಆದರು. ಈ ಗೆಲುವಿನಿಂದಾಗಿ ನ್ಯೂಜಿಲೆಂಡ್ ಪೂಲ್ ಎ ವಿಭಾಗದ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಏರಿದೆ.  
 
ಮೊದಲಿಗೆ ಬ್ಯಾಟಿಂಗ್ ಮಾಡಿದ್ದ ಆಸ್ಟ್ರೇಆಸ್ಟ್ರೇಲಿಯಾ ಧೂಳೀಪಟವಾಗಿದ್ದು, ಕೇವಲ 151 ರನ್‌ಗಳಿಗೆ ತನ್ನ ಎಲ್ಲಾ ವಿಕೆಟ್ ಕಳೆದುಕೊಂಡು ಆಲೌಟ್ ಆಗಿತ್ತು. ನ್ಯೂಜಿಲೆಂಡ್‌ನ ಟ್ರೆಂಟ್ ಬೌಲ್ಟ್ ಅವರ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ  ಆಸ್ಟ್ರೇಲಿಯಾ  ತನ್ನ ಪೂರ್ಣ 50 ಓವರುಗಳನ್ನು ಆಡಲು ವಿಫಲವಾಗಿ 32. 2 ಓವರುಗಳಲ್ಲೇ ಆಲೌಟ್ ಆಗಿದೆ. ಟಿಮ್ ಸೌತೀ ಮತ್ತು ಡೇನಿಯಲ್ ವಿಟ್ಟೋರಿ ತಲಾ 2 ವಿಕೆಟ್ ಕಬಳಿಸಿದರು.

 ಆಂಡರ್‌ಸನ್ ಒಂದು ವಿಕೆಟ್ ಪಡೆದರು. ಆಸ್ಟ್ರೇಲಿಯಾ ಪರ ಆರಾನ್ ಫಿಂಚ್ 14 ರನ್, ಡೇವಿಡ್ ವಾರ್ನರ್ 42 ಎಸೆತಗಳಲ್ಲಿ 34 ರನ್, ಶೇನ್ ವಾಟ್ಸನ್ 30 ಎಸೆತಗಳಲ್ಲಿ 23 ರನ್,  ಬ್ರಾಡ್ ಹ್ಯಾಡಿನ್ 41 ಎಸೆತಗಳಲ್ಲಿ 43 ರನ್ ಗಳಿಸಿದರು.

ಆರಂಭದಲ್ಲಿ ಆಸ್ಟ್ರೇಲಿಯಾ ಪರ ವಿಕೆಟ್‌ಗಳು ಒಂದಾದ ಮೇಲೊಂದು ಪತನವಾದವು. ಬೌಲ್ಟ್ ಅವರ ಮಾರಕ ವೇಗದ ಬೌಲಿಂಗ್ ದಾಳಿಗೆ ಆಸ್ಟ್ರೇಲಿಯಾದ ಮೂವರು ಆಟಗಾರರಾದ ಮ್ಯಾಕ್ಸ್‌ವೆಲ್, ಮಿಚೆಲ್ ಮಾರ್ಷ್ ಮತ್ತು ಮಿಚೆಲ್ ಸ್ಟಾರ್ಕ್ ಬೌಲ್ಡ್ ಔಟ್ ಆದರು. 

ವೆಬ್ದುನಿಯಾವನ್ನು ಓದಿ